

ಸಿಂಧನೂರು: ಹೆಗಲಿಗೆ ಹೆಗಲು ಕೊಟ್ಟು ದುಡಿವ ಎತ್ತುಗಳು ರೈತನ ಬದುಕಿನ ಭಾಗವಾಗಿದ್ದು, ಅವುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಕಾರಹುಣ್ಣಿಮೆಯಾಗಿದೆ ಎಂದು ಕೆಒಎಫ್ ಅಧ್ಯಕ್ಷ ಹಾಗೂ ಮಾಜಿ ಸಚಿವ ವೆಂಕಟರಾವ ನಾಡಗೌಡ ಹೇಳಿದರು.
ನಗರದಲ್ಲಿ ತಾಲೂಕು ರೈತ ಕಾರಹುಣ್ಣಿಮೆ ಸಾಂಸ್ಕೃತಿಕ ಕ್ರೀಡಾ ಉತ್ಸವ ಟ್ರಸ್ಟ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಸಿಂಧನೂರು ಮುಂಗಾರು ಕಾರಹುಣ್ಣಿಮೆ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಒಕಲುತನ ಸಂಕಷ್ಟದ ಸ್ಥಿತಿಗೆ ಬಂದಿದ್ದು, ನಮ್ಮೆಲ್ಲರ ಮನೆಗಳಲ್ಲಿ ಎತ್ತುಗಳಿಲ್ಲದಿರುವ ಸ್ಥಿತಿ ನಿರ್ಮಾಣವಾಗಿದೆ. ಪೂರ್ವಿಕರ ಕಾಲದಿಂದಲೂ ಎತ್ತುಗಳನ್ನು ಬಸವಣ್ಣನಿಗೆ ಹೋಲಿಸಿ, ಪೂಜ್ಯನೀಯವಾಗಿ ಕಾಣುತ್ತಿದ್ದೇವೆ.
ಆದರೆ, ಪ್ರಸ್ತುತ ಎತ್ತುಗಳಿಲ್ಲದ ಒಕ್ಕಲುತನವು ಯಾಂತ್ರಿಕತೆಗೆ ಮಾರುಹೋಗಿದೆ. ಈ ಹಿಂದೆ ಬೀಜೋತ್ಪಾದನೆ ಮಾಡುತ್ತಿದ್ದ ರೈತನ ಬದುಕು ನೆಮ್ಮದಿಯಾಗಿತ್ತು. ಇಂದು ಎಲ್ಲವೂ ಸಿದ್ಧವಾಗಿಯೇ ಸಿಗುತ್ತವೆ. ಆದರೆ, ನೆಮ್ಮದಿ ಇಲ್ಲ ಎಂದರು.
ಎಂಎಲ್ಸಿ ಬಸನಗೌಡ ಬಾದರ್ಲಿ ಮಾತನಾಡಿ, ಕಾರಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ಕೈಗೊಳ್ಳುವ ಸ್ಪರ್ಧೆಗಳು ಆರೋಗ್ಯಕರವಾಗಿವೆ. ಸೋಲು-ಗೆಲುವು ನೋಡದೆ ಎತ್ತುಗಳನ್ನು ಸ್ಪರ್ಧೆಗಿಳಿಸುವ ಮೂಲಕ ರೈತರು ಸಂಭ್ರಮಿಸಬೇಕು.
ರೈತರು ದೇಶದ ಬೆನ್ನೆಲುಬಾಗಿದ್ದು, ಅವರ ಏಳಿಗೆ ಸರ್ಕಾರದ ಧ್ಯೇಯವಾಗಿದೆ. ಈ ಹಬ್ಬ ಆಚರಣೆಗೆ ಸರ್ಕಾರ 5 ಲಕ್ಷ ರೂ. ಅನುದಾನ ನೀಡಿದೆ ಎಂದರು.
ಟ್ರಸ್ಟ್ ಸಂಚಾಲಕ ವೀರೇಶ ಯಡಿಯೂರಮಠ, ಎಪಿಎಂಸಿ ಕಾರ್ಯದರ್ಶಿ ರವಿಚಂದ್ರ ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಮಾಜಿ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ಹನುಮಂತಪ್ಪ ಮುದ್ದಾಪುರ, ಟ್ರಸ್ಟ್ ಅಧ್ಯಕ್ಷ ಚನ್ನನಗೌಡ ಮೇಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ, ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ, ಮಸ್ಕಿಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶೇಕ್ ಮೆಹಬೂಬಸಾಬ್ ಮುದ್ದಾಪುರ, ಗ್ರಾಪಂ ಸದಸ್ಯ ರವಿಗೌಡ ಮಲ್ಲದಗುಡ್ಡ, ಪ್ರಮುಖರಾದ ಚನ್ನನಗೌಡ ಮೇಟಿ, ರವಿರಡ್ಡಿ, ಚನ್ನಪ್ಪ ಕಲ್ಮಂಗಿ, ಅಮರಪ್ಪ, ಹೊಳೆಯಪ್ಪ, ನವಲಿ ಶಾಂತಯ್ಯ, ಮಹಾಂತಪ್ಪಗೌಡ ಇದ್ದರು.