

ಸಿಂಧನೂರು: ರಾಯಚೂರು ನಗರಕ್ಕೆ ಸೆ.5 ರಂದು ಆಗಮಿಸುವ ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿಕೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗಸ್ವಾಮೀಜಿ ಹೇಳಿದರು.
ನಗರದ ಕೋಟೆ ಬಸವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಬಸವ ಸಂಸ್ಕೃತಿ ಅಭಿಯಾನ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಸವತತ್ವ ಅಂದರೆ ಸನ್ಮಾರ್ಗ ತೋರಿಸುವುದು. ಎಲ್ಲರನ್ನು ಒಪ್ಪಿಕೊಂಡ ಹಾಗೂ ಅಪ್ಪಿಕೊಂಡ ದಾರ್ಶನಿಕ ಬಸವಣ್ಣನವರು. ಬದುಕಿನಲ್ಲಿ ದಾರಿ ತಪ್ಪಿದವರಿಗೆ ದಾರಿ ತೋರಿಸಿದಾತ ಹಾಗೂ ಕಾಯಕ ದಾಸೋಹದ ಪರಿಕಲ್ಪನೆಯನ್ನು ಕಲಿಸಿಕೊಟ್ಟಾತ ಬಸವಣ್ಣ. ತತ್ವ ಹೇಳುವುದು ಎಷ್ಟು ಮುಖ್ಯವೋ ಅಷ್ಟೇ ಆಚರಣೆಯಲ್ಲಿ ತರುವುದು ಮುಖ್ಯವಾಗಿರುತ್ತದೆ. ಬಸವ ಸಂಸ್ಕೃತಿ ಅಭಿಯಾನದ ಮೂಲಕ ಪ್ರತಿಯೊಬ್ಬ ಸಾಮಾನ್ಯರಿಗೂ ತತ್ವದ ಮನವರಿಕೆ ಮಾಡಿಕೊಡಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಆದ್ದರಿಂದ ಈ ಅಭಿಯಾನದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದುತಿಳಿಸಿದರು.
ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿ, ಬಸವಣ್ಣ ಎಂದರೆ ಜೀವನ ಕ್ರಮ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿ ತೋರಿಸಿದ ಮಹಾನುಭಾವ. ಎಲ್ಲರ ಸಮಾನತೆ ಮತ್ತು ಏಕತೆಗಾಗಿ ಇಷ್ಟಲಿಂಗ ದಯಪಾಲಿಸಿದ, ಶೋಷಿತರನ್ನು ಶೋಷಣೆಯಿಂದ ಮುಕ್ತಗೊಳಿಸಿದ್ದಾರೆ. ಬಸವಣ್ಣ ಎಲ್ಲ ತರ ಸಮುದಾಯದವರಿಗೆ ಲಿಂಗ ದೀಕ್ಷೆಯನ್ನು ನೀಡಿದರು. ಇಂದು ತಳ ಸಮುದಾಯದವರು ಲಿಂಗ ತತ್ವದಿಂದ ದೂರವಾಗುತ್ತಿರುವುದು ದುರ್ದೈವವೇ ಸರಿ. ಬಸವಣ್ಣನವರು ಹುಟ್ಟಿದ ನಾಡಿನಲ್ಲಿ ಜನಿಸಿದ ನಾವೇ ಧನ್ಯರು. ಬಸವ ಸಂಸ್ಕೃತಿ ಅಭಿಯಾನದ ಮೂಲಕ ವಿಶ್ವ ಭ್ರಾತೃತ್ವ ಬೆಳೆಯುತ್ತದೆ ಎಂದರು.
ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ ಮಾತನಾಡಿದರು. ಬಳಗಾನೂರಿನ ಸಿದ್ದಬಸವ ಸ್ವಾಮೀಜಿ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಟಿ.ಪಂಪನಗೌಡ, ಎಪಿಎಂಸಿ ಮಾಜಿ ರಾಜ್ಯ ಉಪಾಧ್ಯಕ್ಷ ರಾಜಶೇಖರ ಪಾಟೀಲ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ವಕೀಲ, ಪ್ರಮುಖರಾದ ಸೋಮನಗೌಡ ಬಾದರ್ಲಿ, ಸಿದ್ದರಾಮಪ್ಪ ಸಾಹುಕಾರ, ಪಿ.ರುದ್ರಪ್ಪ ಕುರಕುಂದ, ನಾಗನಗೌಡ ರಾಯಚೂರು, ಮಲ್ಲಿಕಾರ್ಜುನ, ಹಂಪಯ್ಯಸ್ವಾಮಿ, ಕರೇಗೌಡ ಕುರುಕುಂದಿ, ಆರ್.ತಿಮ್ಮಯ್ಯ ನಾಯಕ, ಸತ್ಯನಗೌಡ ವಳಬಳ್ಳಾರಿ, ಚನ್ನಬಸವಣ್ಣ, ಕೆ.ಶರಣಪ್ಪ ತೆಂಗಿನಕಾಯಿ, ವೀರಭದ್ರಗೌಡ ಅಮರಾಪುರ, ಗುಂಡಪ್ಪ ಬಳಿಗಾರ, ಪಿ.ಬಸವರಾಜ ಕುರುಕುಂದ, ಶರಣಬಸಪ್ಪ ತುರ್ವಿಹಾಳ, ಎಚ್.ಜಿ ಹಂಪಣ್ಣ, ಶಿವಕುಮಾರ ಜವಳಿ, ಬಸಲಿಂಗಪ್ಪ ಬಾದರ್ಲಿ, ಚಂದ್ರಗೌಡ ಹರೇಟನೂರು, ಚಂದ್ರಶೇಖರ ಯರದಿಹಾಳ ಇತರರಿದ್ದರು.