ಮನೆಗಳ ಮೇಲಿನ ವಿದ್ಯುತ್ ತಂತಿ ತೆರವುಗೊಳಿಸಿ

30082022 snd keb
Published on

ಸಿಂಧನೂರು: ಹೊಸಳ್ಳಿ ಕ್ಯಾಂಪ್‌ನಲ್ಲಿ ಹಲವರ ಮನೆಗಳ ಮೇಲೆ ಹಾದು ಹೋಗಿರುವ 110 ಕೆವಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಜೆಸ್ಕಾಂ ಎಇಇ ಮಲ್ಲಿಕಾರ್ಜುನಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕಳೆದ ಹಲವು ವರ್ಷಗಳಿಂದ ಮನೆಗಳ ಮೇಲೆ 110 ಕೆವಿ ವಿದ್ಯುತ್ ತಂತಿ ಹಾದು ಹೋಗಿದ್ದು, 2018 ರಲ್ಲಿ ತೆರವುಗೊಳಿಸುವ ಕಾರ್ಯಕ್ಕೆ ಅಂದಾಜು ಪತ್ರಿಕೆ ತಯಾರಿಸಿ ಹಣ ಮಂಜೂರು ಆಗಿದ್ದರೂ ಇದುವರೆಗೆ ತೆರವು ಕಾರ್ಯ ನಡೆದಿಲ್ಲ. ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಸತತ ಮಳೆ ಆಗುತ್ತಿರುವುದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಕೆಲವರು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೂಡಲೇ ಈ ಸಮಸ್ಯೆ ಇತ್ಯರ್ಥಗೊಳಿಸಬೇಕೆಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಉಪಾಧ್ಯಕ್ಷ ರಾಮಯ್ಯ ಜವಳಗೇರಾ, ತಾಲೂಕು ಉಪಾಧ್ಯಕ್ಷ ನಿರುಪಾದೆಪ್ಪ ಅಡ್ಡಿ, ಆಂಜನೇಯ ಅಳ್ಳಳ್ಳಿ, ನಾಗಪ್ಪ ಪಟೇಲ್ ಬೂದಿಹಾಳ, ಮಹಾಂತೇಶ ಬೂದಿಹಾಳ, ಬಸಪ್ಪ ಹಿರೇಕುರುಬರು, ಸಂಗನಗೌಡ ಹೊಸೂರು, ಮಾನಯ್ಯ ಅಂಕುಶದೊಡ್ಡಿ, ರಾಮು ನಾಯಕ ನರಕಲದಿನ್ನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net