

ಸಿಂಧನೂರು: ಮಕ್ಕಳ ಸಮ್ಮುಖದಲ್ಲಿ ಪಾಲಕರು ದುಶ್ಚಟ ಪ್ರದರ್ಶನ ಮಾಡಬಾರದು. ವಿವೇಕದ ಸಂಭಾಷಣೆಯೊಂದಿಗೆ ಮಕ್ಕಳಿಗೆ ಮಾದರಿಯಾದರೆ ಪ್ರತಿ ಮನೆಯೂ ಶಾಲೆಯಾಗಿ ಮಾರ್ಪಡುತ್ತದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಡಾ.ಎಸ್.ಶಿವರಾಜ ಹೇಳಿದರು.
ನಗರದ ಪಿಡಬ್ಲ್ಯುಡಿ ಕ್ಯಾಂಪಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಿಬಿಪಿ ಶಾಲೆ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜ್‌ನಲ್ಲಿ 25 ವರ್ಷಗಳ ಹಿಂದೆ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನ ಮತ್ತು ಸ್ನೇಹ-ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವಿದ್ಯಾರ್ಥಿ ಶಾಲೆಗಿಂತ ಮನೆಯಲ್ಲಿ ಹೆಚ್ಚಿನ ಅವಧಿ ಕಳೆಯುತ್ತಾನೆ. ಅಲ್ಲಿ ರೂಪುಗೊಂಡ ಬೌದ್ಧಿಕ ವಿಕಾಸ ಮತ್ತು ಇತರ ಹವ್ಯಾಸಗಳು ಶಾಲಾ ಪರಿಸರದಲ್ಲಿ ಮುಂದುವರಿಯುತ್ತವೆ. ಕುಟುಂಬದಲ್ಲಿ ವಿವೇಕ ಕಲಿತವರು ಸಮಾಜಕ್ಕೂ ಉತ್ತಮ ಕೊಡುಗೆಯಾಗುತ್ತಾರೆ. 25 ವರ್ಷಗಳ ನಂತರವೂ ಗುರುಗಳನ್ನು ಸ್ಮರಿಸುವ ಮತ್ತು ಗೌರವಿಸುವ ಆದರ್ಶ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತಲೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು ಶ್ಲಾಘನೀಯ ಎಂದರು.
ಗುರು ವಂದನೆ ಸ್ವೀಕರಿಸಿದ ಸೂಗುರಯ್ಯ, ಬಸಯ್ಯ, ಉಮಾದೇವಿ, ಚಂದ್ರಮುಖಿ, ಸಿದ್ದೇಶ್ವರಿ, ಶಿವನಗೌಡ ಮಾತನಾಡಿ, ನಾನಾ ಕ್ಷೇತ್ರದಲ್ಲಿ ತಮ್ಮ ವಿದ್ಯಾರ್ಥಿಗಳ ಸಾಧನೆಯನ್ನು ಬಣ್ಣಿಸಿದರು. ಜ್ಯೋತಿ ಗೊಂಡಬಾಳ ಪ್ರಾಸ್ತಾವಿಕ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಾದ ಕವಿತಾ, ಶರಣಬಸವ ಪೊಲೀಸ್ ಪಾಟೀಲ್, ಮಹೇಶ್, ಮಂಜುನಾಥ, ಶೇಕ್ಷಾವಲಿ, ಸುನೀಲ್, ಯಮನೂರ ಮುಳ್ಳೂರು, ಮಹಿಬೂಬು ಮುಳ್ಳೂರು ಇತರರು ಇದ್ದರು.