

ಸಿಂಧನೂರು: ತಾಲೂಕಿನಲ್ಲಿ ಕಳೆದ ತಿಂಗಳು ಸುರಿದ ಮಳೆ, ಹವಾಮಾನ ವೈಪರೀತ್ಯ ಉಂಟಾಗಿ ಭತ್ತದ ಬೆಳೆಗೆ ವೈರಸ್ ತಗುಲಿದ್ದು, ರೋಗ ನಿಯಂತ್ರಣಕ್ಕೆ ರೈತರು ಹರಸಾಹಸ ಪಡುತ್ತಿದ್ದಾರೆ.
ತಾಲೂಕಿನ ಗುಂಜಳ್ಳಿ ಹೋಬಳಿ ವ್ಯಾಪ್ತಿಯ ತಿಡಿಗೋಳ, ನಿಡಿಗೋಳ, ಉಪ್ಪಲದೊಡ್ಡಿ, ಕುರುಕುಂದ, ಬೊಮ್ಮನಾಳ, ದೇವಿಕ್ಯಾಂಪ್, ಸಾಲಗುಂದ, ಕುನ್ನಟಗಿ, ಜಾಲಿಹಾಳ, ಹುಡಾ ಸುತ್ತ್ತಲಿನ ಗ್ರಾಮಗಳ ಸಾವಿರಾರು ಎಕರೆ ಭತ್ತದ ಬೆಳೆಗೆ ವೈರಸ್ ತಗುಲಿದ್ದು, ದಿನೇದಿನೆ ರೋಗದ ವ್ಯಾಪ್ತಿ ಹೆಚ್ಚಾಗುತ್ತಿದೆ.
ಈ ರೋಗ ತಗಲುತ್ತಿದ್ದಂತೆ ಭತ್ತದ ಎಲೆಗಳು ಒಣಗಿ ಸತ್ವ ಕಳೆದುಕೊಳ್ಳುತ್ತಿವೆ. ನೋಡುಗರಿಗೆ ಬೆಳೆ ಒಣಗಿದಂತೆ ಕಾಣುತ್ತಿದೆ. ಅಧಿಕ ಮಳೆ ಹಾಗೂ ಯೂರಿಯಾ ಬಳಕೆಯೇ ರೋಗ ಬರಲು ಕಾರಣ ಎನ್ನಲಾಗುತ್ತಿದ್ದು, ರೋಗ ನಿಯಂತ್ರಣಕ್ಕೆ ತರಲು ರೈತರು ಪರದಾಡುತ್ತಿದ್ದಾರೆ.
ಕ್ರಿಮಿನಾಶಕ ಸಿಂಪಡಣೆ: ತೆನೆ ಬಿಡುವ ಹಂತದಲ್ಲಿರುವ ಭತ್ತದ ಬೆಳೆಗೆ ರೋಗ ಬಂದಿರುವುದರಿಂದ ಬೆಳೆಯ ಇಳುವರಿಯಲ್ಲಿ ಕುಂಠಿತವಾಗಲಿದೆ ಎಂಬ ಆತಂಕ ರೈತರಲ್ಲಿ ಮೂಡಿದೆ. ಮಳೆಯು ಕಡಿಮೆಯಾಗಿ, ಬಿಸಿಲು ಬಿದ್ದರೆ ರೋಗದ ಸಮಸ್ಯೆಯೂ ಕಡಿಮೆಯಾಗಲಿದೆ.
ಆದರೆ, ಮಳೆ ಮತ್ತು ಮುಸುಕಿನ ವಾತಾವರಣದಿಂದ ರೈತರಿಗೆ ಬೆಳೆ ರಕ್ಷಣೆ ಸವಾಲಾಗಿ ಪರಿಣಮಿಸಿದೆ. ತೆನೆ ಬಿಡುವ ಹಂತದ ಬೆಳೆಯ ಮೇಲ್ಭಾಗ ಒಣಗುತ್ತಿದೆ. ರೈತರು ರೋಗ ನಿವಾರಣೆಗೆ ಸಿಕ್ಕಿದ್ದೆಲ್ಲ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾರೆ.
========
ಭತ್ತಕ್ಕೆ ವೈರಸ್ ಮತ್ತು ದುಂಡಾಣು ಎಲೆಮಚ್ಚೆ ರೋಗ ಬಂದಿರುವುದು ಗಮನಕ್ಕಿದೆ. ಇಲಾಖೆಯಿಂದ ರೈತರಿಗೆ ರೋಗ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲಾಗುವುದು. ಈಗಾಗಲೇ ಕೃಷಿ ವಿಜ್ಞಾನಗಳ ವಿವಿಯಿಂದ ಅಗತ್ಯ ಸಲಹೆಯನ್ನು ನೀಡಿದ್ದು, ಮತ್ತೆ ಮಾಹಿತಿ ನೀಡಲಾಗುತ್ತಿದೆ.
> ಮಲ್ಲಿಕಾರ್ಜುನ, ಎಡಿ, ಕೃಷಿ ಇಲಾಖೆ, ಸಿಂಧನೂರು
======