

ಸಿಂಧನೂರು: ನಾವು ಅಧಿಕ ಇಳುವರಿ ಪಡೆಯುವ ಹುಚ್ಚಿನಲ್ಲಿ ರಾಸಾಯನಿಕ ಬಳಕೆ ಮಾಡಿ ಮಣ್ಣಿನ ಗುಣಕ್ಕೆ ಆಪತ್ತು ತಂದಿದ್ದೇವೆ ಎಂದು ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ತಾಲೂಕಿನ ತುರ್ವಿಹಾಳದಲ್ಲಿ ಗುಂಡಯ್ಯ ಅಪ್ಪಾಜಿ ಮಠದ ಜಾತ್ರೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಭತ್ತದ ನಾಡಿನ ಭಕ್ತಿಯ ಜಾತ್ರೆ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲದ ಮಣ್ಣಿನ ಮಹತ್ವ ಅರಿಯದೆ ರಾಸಾಯನಿಕ ಬಳಸಿ ಭೂಮಿ ಬಂಜರುಗೊಳಿಸುತ್ತಿದ್ದರಿಂದ ಪರಿಸರ ಮಾಯವಾಗಿದೆ. ಪರಿಸರ ಸಮೃದ್ಧಿಯಾದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಇಲ್ಲವಾದರೆ ಬದುಕೇ ಭಾರವಾಗಲಿದೆ ಎಂದರು.
ನಂದವಾಡಗಿ ಡಾ.ಚನ್ನಬಸವ ಶಿವಾಚಾರ್ಯರು ಮಾತನಾಡಿ, ಗುಂಡಯ್ಯ ಅಪ್ಪಾಜಿ ಮಠ ಭಕ್ತರು ಶ್ರೀಗಳ ಸ್ಮರಣೆಯಲ್ಲಿ ಮಿಂದೇಳುವ, ಭಕ್ತಿಯ ಪರಾಕಾಷ್ಠೆ ಮೆರೆಯುವ ತಾಣವಾಗಿದೆ. ಸಾಮಾಜಿಕ ಜಾಲತಾಣಗಳಿಂದ ಮಠಗಳ ವಿಚಾರಗಳು ಮರೆಯಾಗುತ್ತಿವೆ. ಜೀವನ ಪಾವನಕ್ಕೆ ಆಚಾರ-ವಿಚಾರಗಳು ಬೇಕು ಎಂದು ಅಭಿಪ್ರಾಯಪಟ್ಟರು.
ಸರ್ವೇಶ್ವರ ಮಠದ ಸದ್ಗುರು ಗುಂಡಯ್ಯ ಅಪ್ಪ, ಪುರವರಮಠದ ಅಮರಗುಂಡಯ್ಯ ಶಿವಾಚಾರ್ಯರು, ಅಮೋಘ ರೇವಣಸಿದ್ಧೇಶ್ವರ ಮಠದ ಪೀಠಾಧಿಪತಿ ಮಾದಯ್ಯ ಗುರುವಿನ್, ವಿನಯ ಮಾತಾ, ಸವಿತಾ ಅಕ್ಕನವರು, ಪಪಂ ಅಧ್ಯಕ್ಷ ಬಾಪುಗೌಡ ದೇವರಮನಿ, ಸದಸ್ಯರಾದ ಶರಣಪ್ಪ ಹೊಸಗೌಡರ, ಕರಿಯಪ್ಪ ವಿರುಪಾಪುರ, ಉಮರಸಾಬ್ ಅರಬ್, ವಿಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ ನಿಂಗಪ್ಪ ಗೋಸಬಾಳ, ಪ್ರಮುಖರಾದ ಮಲ್ಲನಗೌಡ ದೇವರಮನಿ, ಮಹಾಂತೇಶ ಸಾಹುಕಾರ, ಶರಣಯ್ಯ ಸ್ವಾಮಿ ಹಿರೇಮಠ ಕಲಮಂಗಿ, ಪಂಪನಗೌಡ ಜಾಲಿಹಾಳ, ಮಾಜಿ ಅಧ್ಯಕ್ಷ ಮಂಟೆಪ್ಪ ಎಲೆಕೂಡ್ಲಿಗಿ, ರುದ್ರಸ್ವಾಮಿ, ಮರಿಸ್ವಾಮಿ ಹತ್ತಿಗುಡ್ಡ ಇದ್ದರು.