

ಸಿಂಧನೂರು: ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹಾಗೂ ಮೆಡಿಕಲ್ ಸೀಟ್‌ಗಳಲ್ಲಿ ಹೆಚ್ಚಿನ ಮೀಸಲಾತಿ ದೊರೆಯುವಂತೆ ಮಾಡುವಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಅಪಾರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ ಹೇಳಿದರು.
ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ನಿಂದ ಮಂಗಳವಾರ ಆಯೋಜಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 371(ಜೆ) ಕಲಂ ಜಾರಿಯಲ್ಲಿ ಖರ್ಗೆ ಅವರ ಶ್ರಮ ಅಗಾಧ ಎಂದರು.
ಖರ್ಗೆಯವರ ಅಭಿನಂದನಾ ಸಮಾರಂಭಕ್ಕೆ ಕಲ್ಯಾಣ ಕರ್ನಾಟಕದ 41 ವಿಧಾನಸಭಾ ಕ್ಷೇತ್ರದ ಎಲ್ಲ ಕಾಂಗ್ರೆಸ್ಸಿಗರು ಪಾಲ್ಗೊಳ್ಳಬೇಕು. ರಾಜ್ಯದಲ್ಲಿ ಕಳ್ಳದಾರಿಯಿಂದ ಅಧಿಕಾರ ಹಿಡಿದ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಹೇಳಿದರು.
ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತು ಹೋಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ನಾಗವೇಣಿ ಪಾಟೀಲ್ ಮಾತನಾಡಿದರು. ನಯೋಪ್ರಾ ಮಾಜಿ ಅಧ್ಯಕ್ಷ ಕಾಳಿಂಗಪ್ಪ ವಕೀಲ, ಮುಖಂಡರಾದ ಶರಣಪ್ಪ ಮೇಟಿ, ಪಾಮಯ್ಯ ಮುರಾರಿ, ಆರ್.ತಿಮ್ಮಯ್ಯ ನಾಯಕ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ನಗರ ಘಟಕ ಅಧ್ಯಕ್ಷ ಖಾಜಿಮಲಿಕ್, ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ ಬಸನಗೌಡ ಮಾಲಿಪಾಟೀಲ್, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಜಾಗೀರದಾರ್, ಲಿಂಗರಾಜ ಪಾಟೀಲ್ ರಾಗಲಪರ್ವಿ, ಎಂ.ರಂಗನಗೌಡ ಗೊರೇಬಾಳ, ಫಾರೂಕ್‌ಸಾಬ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ, ಸದಸ್ಯೆ ಮಂಜುಳಾ ಪ್ರಭುರಾಜ್, ವೆಂಕಮ್ಮ ಗೊರೇಬಾಳ ಇತರರಿದ್ದರು. ಪ್ರಧಾನ ಕಾರ್ಯದರ್ಶಿ ವೈ.ಅನಿಲ್‌ಕುಮಾರ ನಿರೂಪಿಸಿದರು.
371(ಜೆ) ಕಲಂ ಜಾರಿಯಿಂದ ನಮ್ಮ ಭಾಗದ ಯುವಕರು ಇಂದು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಕಾರಣ. ಈ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ.| ಹಂಪನಗೌಡ ಬಾದರ್ಲಿ, ಮಾಜಿ ಶಾಸಕ