ಜೋಳ ಖರೀದಿ ವಿಳಂಬಕ್ಕೆ ಆಕ್ರೋಶ

Sindhanour formars protest
ಸಿಂಧನೂರಿನ ತಹಸಿಲ್ ಕಚೇರಿ ಎದುರು ಶುಕ್ರವಾರ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಂಘದ ರಾಜ್ಯ ಕಾರ್ಯದರ್ಶಿ ಅಮೀನಪಾಷಾ ದಿದ್ದಗಿ, ಉಪಾಧ್ಯಕ್ಷ ಬಸವರಾಜ ಗೋಡಿಹಾಳ, ಜಿಲ್ಲಾ ಅಧ್ಯಕ್ಷ ಬಸವರಾಜ ಹಂಚಿನಾಳ, ಪ್ರಮುಖರಾದ ಬಸವಂತರಾಯಗೌಡ ಕಲ್ಲೂರು, ನಿರುಪಾದಿ ಗೋಮರ್ಸಿ ಇತರರಿದ್ದರು.
Published on

ಸಿಂಧನೂರು: ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಜೋಳ ಖರೀದಿ ವಿಳಂಬ ಧೋರಣೆ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಶುಕ್ರವಾರ ತಹಸಿಲ್ ಕಚೇರಿ ಮುಖ್ಯದ್ವಾರದ ಮುಂದೆ ಧಾನ್ಯ ತುಂಬಿದ ಟ್ರಾೃಕ್ಟರ್‌ಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಡಿಸೆಂಬರ್‌ನಲ್ಲಿ ನೋಂದಣಿ ಮಾಡಿ, ಜನವರಿಯಲ್ಲಿ ಜೋಳ ಖರೀದಿ ಮಾಡಬೇಕಾಗಿತ್ತು. ಆದರೆ, ಸರ್ಕಾರ ಫೆಬ್ರವರಿಯಲ್ಲಿ ನೋಂದಣಿ, ಮೇನಲ್ಲಿ ಖರೀದಿ ಆರಂಭಿಸಿದೆ. ಇದು ಅಧಿಕಾರಿಗಳ ತಪ್ಪೇ ಹೊರತು ರೈತರದ್ದಲ್ಲ. 45 ದಿನಗಳಾದರೆ ನುಸಿ, 60 ದಿನಗಳಾದರೆ ಹುಳು ಬರುತ್ತದೆ ಎಂಬುದು ಸಾಮಾನ್ಯ ಜನರಿಗೂ ಗೊತ್ತು. ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಓದಿದ ಅಧಿಕಾರಿಗಳಿಗೆ ಇಂಥ ಸಾಮಾನ್ಯ ಜ್ಞಾನ ಇಲ್ಲವೇ?. ತಡವಾಗಿ ಖರೀದಿ ಪ್ರಕ್ರಿಯೆ ಆರಂಭಿಸಿ ಈಗ ಜೋಳ ಕೊಂಡುಕೊಳ್ಳಲು ಕೇಂದ್ರ ಉಗ್ರಾಣ ಅಧಿಕಾರಿಗಳು ನಿರಾಕರಿಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.

ಮುಖ್ಯರಸ್ತೆಯಲ್ಲಿಯೇ ಟ್ರಾೃಕ್ಟರ್‌ಗಳನ್ನು ನಿಲ್ಲಿಸಿದ್ದ ರಿಂದ ಒಂದು ಗಂಟೆ ಕಾಲ ಸಂಚಾರ ಸಿಕ್ಕು (ಟ್ರಾಫಿಕ್ ಜಾಮ್) ಉಂಟಾಯಿತು. ಇದರಿಂದ ರಾಯಚೂರು, ಗಂಗಾವತಿ ಮತ್ತು ಕುಷ್ಟಗಿ ರಸ್ತೆ ಮಾರ್ಗಗಳಲ್ಲಿ ಒಂದೂವರೆ ಕಿಮೀವರೆಗೆ ವಾಹನಗಳು ಸಾಲಾಗಿ ನಿಂತು, ಸವಾರರು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮೀನಪಾಷಾ ದಿದ್ದಗಿ, ಉಪಾಧ್ಯಕ್ಷ ಬಸವರಾಜ ಗೋಡಿಹಾಳ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಂಚಿನಾಳ, ಪ್ರಮುಖರಾದ ಬಸವಂತರಾಯಗೌಡ ಕಲ್ಲೂರು, ನಿರುಪಾದಿ ಗೋಮರ್ಸಿ, ಚನ್ನಬಸವ ಕುಂಬಾರ, ದೇವೇಂದ್ರಗೌಡ, ಶರಣೇಗೌಡ ನಾಗಲಾಪುರ, ಶಂಕ್ರಪ್ಪ ಹೂಗಾರ, ರಾಜಾಸಾಬ್ ಬನ್ನಿಗನೂರು, ವೀರೇಶ, ದೇವರಾಜ ನಾಯಕ, ಮಹಾಂತಯ್ಯಸ್ವಾಮಿ, ಚನ್ನಯ್ಯ, ಪರಮಾನಂದಸ್ವಾಮಿ, ಗಂಗಾಧರ್, ನಾಗನಗೌಡ, ಅಯ್ಯಪ ್ಪ, ಸೂಗೂರಪ್ಪ ಮೇಟಿ, ಬಸವರಾಜ ಬನ್ನಿಗನೂರು, ರಾಮಣ್ಣ, ವೀರೇಶಪ್ಪ, ಉಮೇಶ ಹೊಗರನಾಳ ಇದ್ದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡ ಪಾಲ್ಗೊಂಡು ಹೋರಾಟ ಬೆಂಬಲಿಸಿದರು.

ರಸ್ತೆಯಲ್ಲಿ ಬಿದ್ದ ಅನ್ನ ತಿಂದರು

ರೈತರು ಗಾಂಧಿವೃತ್ತದ (ತಹಸಿಲ್ ಕಚೇರಿ ಮುಂದೆ) ಬಳಿ ದಿಢೀರ್ ಪ್ರತಿಭಟನೆಗೆ ಮುಂದಾಗಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿ ತಿಳಿಗೊಳಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ರೈತರು ಅನ್ನವನ್ನು ರಸ್ತೆ ಮೇಲೆ ಚೆಲ್ಲಿ ಮತ್ತದನ್ನೇ ತಿನ್ನುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ನಿರ್ಲಕ್ಷೃ ಧೋರಣೆ ವಿರುದ್ಧ ಹರಿಹಾಯ್ದರು.

ರೈತರು ರಸ್ತೆ ಮೇಲೆ ಚೆಲ್ಲಿದ ಅನ್ನವನ್ನು ತಿನ್ನುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net