ಎಚ್ಚರಿಕೆಯಿಂದ ಗೇಜ್ ನಿರ್ವಹಣೆ ಮಾಡಿ

Sindhanour Irrigation Officers Meeting
ಸಿಂಧನೂರಿನ ತಾಪಂ ಸಭಾಂಗಣದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯನ್ನು ಶಾಸಕ ಹಂಪನಗೌಡ ಬಾದರ್ಲಿ ನಡೆಸಿದರು. ಯರಮರಸ ನೀರಾವರಿ ಇಲಾಖೆಯ ಎಸ್‌ಇ ಶಿವಶಂಕರ, ತಾಪಂ ಇಒ ಚಂದ್ರಶೇಖರ ಇದ್ದರು.
Published on

ಸಿಂಧನೂರು: ಎಡದಂಡೆ ನಾಲೆಯ ಕೊನೆಯ ಭಾಗದ ಹೊಲಗಳಿಗೆ ಸಮರ್ಪಕ ನೀರು ಹರಿದು ಹೋಗುವಂತೆ ನೋಡಿಕೊಳ್ಳುವುದು ನೀರಾವರಿ ಇಲಾಖೆ ಕೆಲಸವಾಗಿದ್ದು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ನೀರಾವರಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಎಡದಂಡೆ ನಾಲೆಯ 36, 45 ಹಾಗೂ 54 ಸೇರಿ ಇತರ ಉಪಕಾಲುವೆಯಲ್ಲಿ ಹರಿಯುವ ನೀರಿನ ಪ್ರಮಾಣ, ಎಷ್ಟು ಕ್ಯೂಸೆಕ್ ನೀರು ಲಭ್ಯವಾದರೆ ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಸಬಹು ಎಂಬುದನ್ನು ಅಧಿಕಾರಿಗಳು ಮೊದಲು ಅರಿಯಬೇಕು. ಅಲ್ಲಲ್ಲಿ ಪೈಪ್‌ಗಳನ್ನು ವ್ಯತ್ಯಾಸವಿಲ್ಲದೆ ಹಾಕಿರುವುದು ಸಮಸ್ಯೆಗೆ ಕಾರಣವಾಗಿದೆ. ನಾವು ಖುದ್ದಾಗಿ ಕಾಲುವೆಗೆ ಭೇಟಿ ನೀಡಿದಾಗ ನಾಲ್ಕೈದು ಪೈಪ್‌ಗಳನ್ನು ಅಧಿಕಾರಿಗಳಿಗೆ ತೋರಿಸಿ, ಕಿತ್ತಿ ಹಾಕಲಾಗಿದೆ. ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಸಿಕೊಂಡರೆ ಕೊನೆ ಭಾಗಕ್ಕೆ ನೀರು ತಲುಪುವುದು ಹೇಗೆ ? ಎಂದು ಪ್ರಶ್ನಿಸಿದರು. 54ನೇ ಉಪಕಾಲುವೆ ವ್ಯಾಪ್ತಿಯ 45 ಕಿಮೀ ಇದ್ದು 86 ಸಾವಿರ ಎಕರೆಗೆ ನೀರುಣಿಸುವ ಅತೀ ದೊಡ್ಡ ಕಾಲುವೆ ಇದಾಗಿದೆ. ಈ ಕಾಲುವೆ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ ಎನ್ನುವುದು ರೈತರ ದೂರಾಗಿದೆ. ಈಗ ಲಭ್ಯವಾಗುತ್ತಿರುವ 165 ಕ್ಯೂಸೆಕ್ ನೀರಿನ ಆಧಾರದಲ್ಲಿ ರೈತರ ಜಮೀನುಗಳಿಗೆ ನೀರು ಹರಿಸಬಹುದೆಂಬ ಲೆಕ್ಕಾಚಾರ ಹಾಕಿಕೊಳ್ಳಬೇಕು. ಸಮಸ್ಯೆ ಆಗದಂತೆ ಎಚ್ಚರಿಕೆಯಿಂದ ಗೇಜ್ ನಿರ್ವಹಣೆ ಮಾಡಬೇಕು.

ಎಡದಂಡೆ ನಾಲೆ ಆರಂಭದಿಂದಲೇ ಎಲ್ಲ ರೈತರಿಗೆ ಮಾಹಿತಿ ನೀಡುವ ಕರಪತ್ರ ನೀಡುವುದು, ನೀರು ಸೋರಿಕೆ ಆಗದಂತೆ, ಗೊಂದಲ ಸೃಷ್ಟಿ ಆಗದಂತೆ ಯರಮರಸ ವಿಭಾಗದ ಎಸ್‌ಇ ಕಾರ್ಯನಿರ್ವಹಣೆ ಮಾಡಬೇಕು. ಸಮಸ್ಯೆ ಆದರೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಯರಮರಸ್ ನೀರಾವರಿ ಇಲಾಖೆ ಎಸ್‌ಇ ಶಿವಶಂಕರ ಮಾತನಾಡಿ, ಸೂಚನೆಯಂತೆ ಕೊನೆಯ ಭಾಗದ ರೈತರಿಗೆ ಅನ್ಯಾಯವಾಗದಂತೆ ನೀರು ಒದಗಿಸಲಾಗುವುದು. ಆಯಾ ಕಾಲುವೆಗಳ ವ್ಯಾಪ್ತಿಯಲ್ಲಿ ಕಟ್ಟೆಚ್ಚರವಹಿಸಿ, ನೀರು ಪೋಲಾಗದಂತೆ ಕೆಳ ಭಾಗಕ್ಕೆ ಸಮರ್ಪಕ ನೀರು ಮುಟ್ಟುವಂತೆ ನೋಡಿಕೊಳ್ಳಲಾಗುವುದು ಎಂದರು.

ನೀರಾವರಿ ಇಲಾಖೆಯ ಇಇ ಸತ್ಯನಾರಾಯಣ, ಜವಳಗೇರಾ ಉಪವಿಭಾಗದ ಶಿವಪ್ಪ, ತುರ್ವಿಹಾಳ ಉಪವಿಭಾಗದ ಹನುಮಂತಪ್ಪ, ಮಸ್ಕಿ ಉಪವಿಭಾಗದ ದೌಲಸಾಬ, ಅಧಿಕಾರಿಗಳಾದ ಹನುಮರಡ್ಡಿ, ಅಮರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net