ಸಿಂಧನೂರು: ನಗರದಲ್ಲಿ ದಸರಾ ಉತ್ಸವ ಅಂಗವಾಗಿ ಕಲಾ ದಸರಾ ಸಮಿತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ವಿಜೇತರನ್ನು ಪ್ರಶಸ್ತಿಗೆ ಆಯ್ಕೆಗೊಳಿಸಲಾಯಿತು.
ರಾಜ್ಯದ ವಿವಿಧ ಭಾಗಗಳಿಂದ ಅನೇಕ ಹಿರಿಯ ಕಲಾವಿದರನೊಳಗೊಂಡಂತೆ 110ಕ್ಕೂ ಹೆಚ್ಚು ಅಮೂಲ್ಯವಾದ ಚಿತ್ರಕಲಾ ಕೃತಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ವಿವಿಧ ಮಾಧ್ಯಮದ ,ರೇಖಾಚಿತ್ರ ,ಸೃಜನಶೀಲಾಕೃತಿಗಳು, ಸಾಂಪ್ರದಾಯಿಕ ಕಲಾ ಕೃತಿಗಳು ,ಭೂ ದೃಶ್ಯಗಳು , ಭಾವಚಿತ್ರ ಹಾಗೂ ಸಮಕಾಲಿನ ಚಿತ್ರಗಳನ್ನು ಒಳಗೊಂಡಂತೆ ಕಲಾಕೃತಿಗಳು ಸ್ಪರ್ಧೆಗೆ ಬಂದಿದ್ದವು. ಡಾ. ಎಂ.ಸಿ.ಬಾಗೋಡಿ ಅವರ ನೇತೃತ್ವದ ಸಮಿತಿಯು ಅತ್ಯುತ್ತಮ ಐದು ಕಲಾ ಕೃತಿಗಳಿಗೆ ಸಿಂಧನೂರು ದಸರಾ ಪ್ರಶಸ್ತಿಯೊಂದಿಗೆ ತಲಾ 10,000 ನಗದು ಬಹುಮಾನಕ್ಕೆ ಆಯ್ಕೆ ಮಾಡಿದೆ. ಉಳಿದಂತೆ 10 ಉತ್ತಮ ಕಲಾಕೃತಿಗಳಿಗೆ ಮೆರಿಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಗುರುನಾಥ ಕಟ್ಟಿ ಅವರ ಬಾಗಲಕೋಟೆ ಸೃಜನಶೀಲ ಕಲಾಕೃತಿ, ಅಶ್ವಿನಿ ಎಂ.ಎಚ್ ಅವರ ಹಾವೇರಿ ಸೃಜನಶೀಲ ಕಲಾಕೃತಿ, ರವಿ ನಾಯಕ ಅವರ ರಾಯಚೂರು ರೇಖಾಚಿತ್ರ (ರಥೋತ್ಸವ), ಎಸ್.ಎಸ್. ಸಾವಳಗಿ ಅವರ ಯಾದಗಿರಿ ಮಹಾಕೂಟ ಭೂದೃಶ್ಯ (ಜಲವರ್ಣ), ಕೀರ್ತಿ ಆರ್ ಅವರ ಮೈಸೂರು ಸಾಂಪ್ರದಾಯಿಕ ಚಿತ್ರ ದಸರಾ ಪ್ರಶಸ್ತಿಗೆ ಆಯ್ಕೆಯಾಗಿದೆ.
ಯಮನೂರ ಸಾಬ ಅವರ ಕೊಪ್ಪಳ ಭಾವಚಿತ್ರ (ಜಲರ್ವಣ), ದಿನೇಶ ಬಿ ಅವರ ಬದಾಮಿ ಭೂದೃಶ್ಯ (ಜಲವರ್ಣ), ಪೂಜಾ ಮರಬಸಣ್ಣವರ್ ಸಾಂಪ್ರದಾಯಿಕ ಚಿತ್ರ, ಉಮೇಶ ಮಂಜಣ್ಣವರ್ ಅವರ ಧಾರವಾಡ ಮೈಸೂರು ಸಾಂಪ್ರದಾಯಿಕ ಚಿತ್ರ, ಅಮರೇಶ ಜವಳಗೇರಾ ಬುದ್ಧ (ಸಮಕಾಲಿನ ಚಿತ್ರ), ನಜಮಲೆ ಹುಸ್ಸೇನ್ ಅವರ ಸಿಂಧನೂರು ಸೃಜನಶೀಲ ಕಲಾಕೃತಿ, ಚಿದಾನಂದ ಸುತಾರ್ ಅವರ ಕಲಬುರಗಿ ಸೃಜನಶೀಲ ಕಲಾಕೃತಿ, ಸಿದ್ದಪ್ಪ ವಿ. ನಾಯಕ ಅವರ ಲಿಂಗಸೂಗೂರು ಸಂಪ್ರದಾಯ ನೆಲೆಯ ಸಮಕಾಲಿನ ಚಿತ್ರ, ಪ್ರಭಾಕರ್ ಮಂಕಲ್ ಅವರ ರಾಯಚೂರು ಭಾವಚಿತ್ರ (ಪೆನ್ಸಿಲ್), ಹನುಮೇಶ ಅವರ ಗಂಗಾವತಿ ಭೂದೃಶ್ಯ (ಜಲವರ್ಣ) ಉತ್ತಮ ಕಲಾಕೃತಿಗಳಿಗೆ ಮೆರಿಟ್ ಪ್ರಶಸ್ತಿಗೆ ಆಯ್ಕೆಗೊಂಡಿವೆ ಎಂದು ಕಲಾ ದಸರಾ ಕಾರ್ಯದರ್ಶಿ ದೇವೇಂದ್ರ ಹುಡಾ ತಿಳಿಸಿದ್ದಾರೆ.