

ಸಿಂಧನೂರು: ಶಿವಶರಣ ಹಡಪದ ಅಪ್ಪಣ್ಣ 12 ನೇ ಶತಮಾನದಲ್ಲಿ ಆದ್ಯ ವಚನಕಾರರಾಗಿದ್ದು, ಪ್ರಮುಖ ವಚನಗಳ ಮುಖಾಂತರ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ ಎಂದು ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ ಹೇಳಿದರು.
ನಗರದ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪ್ರಾದೇಶಿಕ ಅರಣ್ಯ ವಲಯ, ವನಸಿರಿ ಫೌಂಡೇಷನ್ ಮತ್ತು ಸನ್ ರೈಸ್ ಕಾಲೇಜ್ ವತಿಯಿಂದ ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಕಾಯಕಯೋಗಿ ಬಸವಣ್ಣ ಅವರ ಕಲ್ಯಾಣದ 770 ಗಣಾಂಗಗಳ ವಚನಕಾರರಲ್ಲಿ ಹಡಪದ ಅಪ್ಪಣ್ಣ ಕೂಡ ಒಬ್ಬರಾಗಿದ್ದು, ಅವರ ವಚನಗಳಲ್ಲಿ ಬದುಕಿನ ತಿರುಳು ಇದೆ. ಅಪ್ಪಣ್ಣ ಅವರ ವಚನಗಳ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕೆಂದು ಡಿ.ಎಚ್.ಕಂಬಳಿ ಹೇಳಿದರು.
ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಚಾರ್ಯ ಮನೀಷ್ ಕಿರ್ಲೋಸ್ಕರ್ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಪರಿಸರ ಬೆಳೆಸಿದಷ್ಟು ನಮ್ಮ ಆಯಸ್ಸು ಗಟ್ಟಿಯಾಗಲಿದೆ ಎಂದರು. ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳಾದ ಅರುಣಾ, ಮುನಿಸ್ವಾಮಿ, ಲಿಂಗಾದರ, ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ, ಸಹ ಕಾರ್ಯದರ್ಶಿ ರಂಜಾನ್ ಸಾಬ್ ಲೋಹಾರ್, ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ಉಪನ್ಯಾಸಕರಾದ ಕೆ.ಬಿ.ಹವಾಲ್ದಾರ, ಕೃಷ್ಣ, ಹನಮಂತಪ್ಪ ಇದ್ದರು.