ಸಿಂಧನೂರು: ನಗರದಲ್ಲಿ ಸರ್ಕಾರದ ಅನುದಾನದಿಂದ ನಡೆದ ದಸರಾ ಉತ್ಸವದಲ್ಲಿ ಸ್ತಬ್ಧಚಿತ್ರ ಮೆರವಣಿಗೆ ವೇಳೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಭಾವಚಿತ್ರವನ್ನು ಬಳಸದಿರುವುದು ಹಾಗೂ ಸಂವಿಧಾನ ಪೀಠಿಕೆ ಓದದಿರುವುದು ಖಂಡನೀಯ ಎಂದು ಮಾದಿಗ ಮಹಾಸಭಾದ ಅಧ್ಯಕ್ಷ ಅಮರೇಶ ಗಿರಿಜಾಲಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಸರಾ ಉತ್ಸವಕ್ಕಾಗಿ ಕೋಟಿಗಟ್ಟಲೆ ಅನುದಾನ ಖರ್ಚು ಮಾಡಲಾಗಿದೆ. ಉತ್ಸವ ಮಾಡಿದ್ದು ಒಳ್ಳೆಯದ್ದೇ ಆಗಿದ್ದರೂ, ಸರಿಯಾಗಿ ನಿರ್ವಹಣೆ ಮಾಡಿಲ್ಲ.
ಮೈಸೂರು ದಸರಾದಲ್ಲಿ ಸಂವಿಧಾನದ ಪೀಠಿಕೆ ಓದಿದ ಬಳಿಕ ಕಾರ್ಯಕ್ರಮ ನಡೆದಿದೆ. ಆದರೆ, ಸಿಂಧನೂರಿನಲ್ಲಿ ತಹಸೀಲ್ದಾರ್ ಅವರು ನಿರ್ಲಕ್ಷಿಸಿದ್ದಾರೆ. ಸಂವಿಧಾನದಿಂದ ಅಧಿಕಾರ ಪಡೆದ ಅಧಿಕಾರಿಗಳು, ಮೋಜು ಮಸ್ತಿಗಾಗಿ ಕಾರ್ಯಕ್ರಮ ಮಾಡಿದ್ದಾರೆ.
ಕೂಡಲೇ ತಹಸೀಲ್ದಾರರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ವೀರೇಶ ಉಪ್ಪಲದೊಡ್ಡಿ, ನಿರುಪಾದಿ ಸಾಸಲಮರಿ, ಹೊಳಿಯಪ್ಪ ದಿದ್ದಗಿ, ಕಂಟೇಶ ಬಸಾಪುರ, ಶಿವರಾಜ ಉಪ್ಪಲದೊಡ್ಡಿ, ಅಂಬಣ್ಣ ಮಲ್ಲಾಪುರ, ರಮೇಶ ಬಪ್ಪೂರು, ವೆಂಕಟೇಶ ಹೊಸಳ್ಳಿ ಇದ್ದರು.