ದಸರಾ ಉತ್ಸವಕ್ಕೆ ಸಜ್ಜಾದ ಸಿಂಧನೂರು; ಇಂದಿನಿಂದ ವಿವಿಧ ಕಾರ್ಯಕ್ರಮಗಳು

Sindhanour dasara light
ದಸರಾ ಉತ್ಸವ ನಿಮಿತ್ತ ಸಿಂಧನೂರಿನಲ್ಲಿ ಹೆದ್ದಾರಿಗೆ ದೀಪಾಲಂಕಾರ ಮಾಡಿರುವುದು.
Published on

ಸಿಂಧನೂರು : ನಗರದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಕಳೆದ ವರ್ಷ ಸರ್ಕಾರದಿಂದ ಆಯೋಜಿಸಿದ್ದ ದಸರಾ ಉತ್ಸವವನ್ನು ಈ ಬಾರಿಯೂ ವಿನೂತನವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದೇ 22ರಿಂದ ಐದು ದಿನ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಐದು ದಿನ ಸಿಂಧನೂರು ನಗರದಲ್ಲಿ ದಸರಾ ಉತ್ಸವ ಆಚರಣೆಗೆ ತಯಾರಿ ಬಹುತೇಕ ಪೂರ್ಣಗೊಂಡಿದೆ. ಶಾಸಕ ಹಂಪನಗೌಡ ನೇತೃತ್ವದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಸಹಯೋಗದೊಂದಿಗೆ 10 ದಿನಗಳವರೆಗೆ ದಸರಾ ಉತ್ಸವ ನಡೆಯಲಿದ್ದು, ಈ ಬಾರಿ ಹಳ್ಳಿಗಳಿಗೂ ವಿಸ್ತರಿಸಲಾಗಿದೆ.

ಸಾರಿಗೆ ಬಸ್ ವ್ಯವಸ್ಥೆ: ಈಗಾಗಲೇ ತಾಲೂಕು ಆಡಳಿತ, ತಾಪಂ ಹಾಗೂ ನಗರಸಭೆಯ ಪ್ರಮುಖರ ಸಭೆ ಮಾಡಿ, ಜವಾಬ್ದಾರಿಗಳನ್ನು ವಹಿಸಲಾಗಿದೆ. ಮಳೆ ಇರುವುದರಿಂದ ನಗರದಲ್ಲಿ ಸ್ಥಳ ನಿಗದಿಯಾಗಿಲ್ಲ. ಒಂದು ದಿನ ಪೂರ್ವದಲ್ಲಿ ಈ ಬಗ್ಗೆ ನಿರ್ಣಯಿಸಲಾಗುವುದು. ಇನ್ನು ಸಾವಿರಾರು ಜನ ಸೇರಲು ವ್ಯವಸ್ಥೆ ಮತ್ತು ವೇದಿಕೆ ನಿರ್ಮಿಸುವ ಯೋಜನೆ ಇದೆ. ಇನ್ನು ತಾಲೂಕಿನ ಮುಕ್ಕುಂದ, ಗಾಂಧಿನಗರ, ಆರ್.ಎಚ್.ನಂ.2, ಯಾಪಲಪರ್ವಿ ಹಾಗೂ ಪಗಡದಿನ್ನಿ ಕ್ಯಾಂಪ್ ಗ್ರಾಪಂ ಕೇಂದ್ರಗಳಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.

ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ: ಸಿಂಧನೂರು ನಗರದಲ್ಲಿ ಕಳೆದ ವರ್ಷದಿಂದ ಯಾವುದೇ ರಾಷ್ಟ್ರೀಯ ಹಬ್ಬ, ಉತ್ಸವಗಳು ಆಚರಿಸಿದರೂ ವಿದ್ಯುತ್ ದೀಪಾಲಂಕಾರ ಕಡ್ಡಾಯ ಎಂಬಂತಾಗಿದೆ. ರಾಯಚೂರು, ಗಂಗಾವತಿ ಹಾಗೂ ಕುಷ್ಟಗಿ ಹೆದ್ದಾರಿ ಮಾರ್ಗಗಳು ಸೇರಿ ವಿವಿಧೆಡೆ ದೀಪಾಲಂಕಾರ ಮಾಡಲಾಗಿದ್ದು, ನಗರ ವರ್ಣರಂಜಿತವಾಗಿ ಕಂಗೊಳಿಸುತ್ತಿದೆ. ಸ್ಥಳೀಯರಲ್ಲಿ ದಸರಾ ಉತ್ಸವದ ಸಂಭ್ರಮ ಇಮ್ಮಡಿಯಾಗಿದ್ದು, ಕಣ್ತುಂಬಿಕೊಳ್ಳಲು ಕಾದಿದ್ದಾರೆ.

ತುಂಗಭದ್ರೆಗೆ ಅಂಬಾ ಆರತಿ

ತಾಲೂಕಿನ ಶ್ರೀ ಅಂಬಾದೇವಿ ಸನ್ನಿಧಿಯಿಂದ ದಸರಾ ಉತ್ಸವ ಮೆರವಣಿಗೆ ಆರಂಭಿಸಲಿದ್ದು, ಮುಕ್ಕುಂದ ಬಳಿ ತುಂಗಭದ್ರಾ ನದಿಗೆ ಅಂಬಾ ಆರತಿ ಸಲ್ಲಿಸಲಾಗುತ್ತದೆ. ಕಾಶಿ, ವಾರಾಣಸಿಯ ಅರ್ಚಕರಿಂದ ಸೆ.22ರ ಸಂಜೆ 6 ಗಂಟೆಗೆ ತುಂಗಭದ್ರಾಗೆ ಅಂಬಾ ಆರತಿ ನೆರವೇರಲಿದ್ದು, ಹಲವು ಮಠಗಳ ಶ್ರೀಗಳು ಪಾಲ್ಗೊಳ್ಳಲಿದ್ದಾರೆ. ಅಂಬಾ ಮಠದಲ್ಲಿ ಹಸಿರು ದಸರಾ, ನವರಾತ್ರೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸೆ.22ರಿಂದ 26ರವರೆಗೆ ಕ್ರಮವಾಗಿ ಗಾಂಧಿನಗರ, ಆರ್.ಎಚ್.ನಂ.2, ಯಾಪಲಪರ್ವಿ, ಪಗಡದಿನ್ನಿ ಕ್ಯಾಂಪ್‌ನಲ್ಲಿ ಗ್ರಾಮೀಣ ದಸರಾ ನಡೆಯಲಿದೆ. ಕ್ರೀಡಾಕೂಟ, ಸ್ಥಳೀಯ ಕಲಾವಿದರು ಹಾಗೂ ಸರಿಗಮಪ ಖ್ಯಾತಿಯ ಕಲಾವಿದರಿಂದ ಜಾನಪದ ಸೊಗಡು ಹೊಮ್ಮಲಿದ್ದು, ಸೆ.27 ರಿಂದ ಅ.2 ವರೆಗೆ ಸಿಂಧನೂರಿನಲ್ಲಿ ಶಿಕ್ಷಣ ದಸರಾ, ಆರೋಗ್ಯ ದಸರಾ, ಸಾಂಸ್ಕೃತಿಕ ದಸರಾ, ಕಲಾ ದಸರಾ, ಯುವ ದಸರಾ ನೆರವೇರಲಿವೆ. ಕೊನೆಯ ದಿನ ಶ್ರೀ ಅಂಬಾದೇವಿ ಉತ್ಸವ ಮೂರ್ತಿಯನ್ನು ಅಂಬಾರಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ದಸರಾ ಆಚರಣೆಗೆ ಇತಿಹಾಸವಿದೆ. ಮೈಸೂರು ಮಾದರಿಯಂತೆ ಸಿಂಧನೂರಿನಲ್ಲಿ ಕಳೆದ ವರ್ಷ ದಸರಾ ಉತ್ಸವ ಆಚರಿಸಲಾಗಿದೆ. ಈ ಬಾರಿ ಹಬ್ಬವನ್ನು ವಿನೂತನವಾಗಿ ಆಚರಿಸಲು ಶಾಸಕರು ನಿರ್ಧರಿಸಿದ್ದು, ಸಂಪೂರ್ಣ ಸಹಕಾರ ನೀಡಲಾಗುವುದು. | ಕೆ.ವಿರೂಪಾಕ್ಷಪ್ಪ ಮಾಜಿ ಸಂಸದ, ಸಿಂಧನೂರು ಕಳೆದ ವರ್ಷ ದಸರಾ ಉತ್ಸವ ಆರಂಭಿಸಿದಾಗ ಆತಂಕ ಇತ್ತು. ನಾನು ನಿರೀಕ್ಷೆ ಮಾಡಿರುವುದ ಕ್ಕಿಂತ ಹೆಚ್ಚು ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿದ್ದಕ್ಕೆ ಯಶ ಕಂಡಿತು. ಈ ವರ್ಷವೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮದ ಸಿದ್ಧತೆ ನಡೆಸಲಾಗಿದೆ. ದಸರಾ ಉತ್ಸವವನ್ನು ಹಳ್ಳಿಗಳಿಗೂ ವಿಸ್ತರಿಸಲಾಗಿದೆ. | ಹಂಪನಗೌಡ ಬಾದರ್ಲಿ ಶಾಸಕ, ಸಿಂಧನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net