ಸಂವಿಧಾನದ ನಿರ್ಮಾತೃಗೆ ಅವಮಾನ

Sindhanour CPML protest
ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಸಿಂಧನೂರಿನ ತಹಸಿಲ್ ಕಚೇರಿ ಬಳಿ ಸಿಪಿಐ(ಎಂಎಲ್) ಲಿಬರೇಷನ್ ಪಾರ್ಟಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್, ಪ್ರಮುಖರಾದ ಬಸವರಾಜ ಎಕ್ಕಿ, ಬಸವರಾಜ ಕೊಂಡೆ, ಬಸವರಾಜ ಬೆಳಗುರ್ಕಿ, ಶ್ರೀನಿವಾಸ ಬುಕ್ಕನಹಟ್ಟಿ, ರಾಘವೇಂದ್ರ ಉಪ್ಪಳ ಇದ್ದರು.
Published on

ಸಿಂಧನೂರು: ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹಮಂತ್ರಿ ಅಮಿತ್ ಷಾ ಅವರು ರಾಜ್ಯಸಭೆ ಕಲಾಪದಲ್ಲಿ ನೀಡಿರುವ ಹೇಳಿಕೆ ಖಂಡಿಸಿ ಸಿಪಿಐ(ಎಂಎಲ್) ಲಿಬರೇಷನ್ ಪಕ್ಷದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ಹೆಸರು ಈಗ ಶೋಕಿ ಆಗಿಬಿಟ್ಟಿದೆ. ಇಷ್ಟೊಂದು ಬಾರಿ ದೇವರ ಹೆಸರು ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗಪ್ರಾಪ್ತಿ ಆಗುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಮೂಲಕ ರಾಷ್ಟ್ರದ್ರೋಹ ಕೃತ್ಯ ಎಸಗಿದ್ದಾರೆ. ಸಂವಿಧಾನದತ್ತ ಕೇಂದ್ರ ಸಚಿವ ಸ್ಥಾನದಲ್ಲಿದ್ದು, ಸಂವಿಧಾನ ನಿರ್ಮಾತೃ ಕುರಿತು ಹೀನಾಯ ಹೇಳಿಕೆ ನೀಡಿರುವುದು ಬಿಜೆಪಿಯವರು ಸಂವಿಧಾನದ ಬಗ್ಗೆ ಸಿಟ್ಟು ಹೊರಹಾಕಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಆರ್‌ಎಸ್‌ಎಸ್ ಕೂಸಾದ ಬಿಜೆಪಿ ಜನರ ಮೇಲೆ ಮನುವಾದ ಹೇರಲು ಹೊರಟಿದೆ. ಅದರ ಭಾಗವಾಗಿ ಅಮಿತ್ ಷಾ ಮಾತನಾಡಿದ್ದಾರೆ. ಈ ಹೇಳಿಕೆ ಖಂಡನಾರ್ಹವಾಗಿದ್ದು, ಕೂಡಲೇ ಅಮಿತ್ ಷಾ ಬೇಷರತ್ ಕ್ಷಮೆಯಾಚಿಸಿ ರಾಜೀನಾಮೆ ಕೊಡಬೇಕು. ರಾಷ್ಟ್ರದ್ರೋಹ ಆರೋಪದಡಿ ಅಮಿತ್ ಷಾ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲಾಯಿತು.

ಪ್ರಮುಖರಾದ ಹುಲುಗಪ್ಪ ಹುಲುಗುಂಚಿ, ಶೇಕ್ಷಾವಲಿ, ಮಂಜುನಾಥ, ಹನುಮಂತ ಬೂದಿವಾಳಕ್ಯಾಂಪ್, ಕಂಠೆಪ್ಪ ರೈತನಗರಕ್ಯಾಂಪ್, ಮಲ್ಲಿಕಾರ್ಜುನ ರೈತನಗರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net