ಸಿಂಧನೂರು, ಮಸ್ಕಿ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಿ

MANAVI
ಸಿಂಧನೂರು ಹಾಗೂ ಮಸ್ಕಿ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ಸಿಪಿಐ(ಎಂಎಲ್) ಲಿಬರೇಷನ್ ಮಂಗಳವಾರ ತಹಸಿಲ್ ಕಚೇರಿ ಶಿರಸ್ತೇದಾರ್ ಚಂದ್ರಶೇಖರ್‌ಗೆ ಮನವಿ ಸಲ್ಲಿಸಿತು. ಲಿಬರೇಷನ್ ಸದಸ್ಯರಾದ ನಾಗರಾಜ ಪೂಜಾರ್, ಗಂಗಪ್ಪ ತೋರಣದಿನ್ನಿ, ಬಸವರಾಜ ಬೆಳಗುರ್ಕಿ ಇದ್ದರು.
Published on

ಸಿಂಧನೂರು: ಸಿಂಧನೂರು ಹಾಗೂ ಮಸ್ಕಿ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ವಿಶೇಷ ಅನುದಾನ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಸಿಪಿಐ(ಎಂಎಲ್) ಲಿಬರೇಷನ್ ಮಂಗಳವಾರ ತಹಸಿಲ್ ಕಚೇರಿ ಶಿರಸ್ತೇದಾರ್ ಚಂದ್ರಶೇಖರ್‌ಗೆ ಮನವಿ ಸಲ್ಲಿಸಿತು.

ಸಿಂಧನೂರು ತಾಲೂಕನ್ನು ಬರಪೀಡಿತ ಪ್ರದೇಶ ಪಟ್ಟಿಯಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರ ಕ್ರಮ ಖಂಡನೀಯ. ಮಸ್ಕಿ ತಾಲೂಕು ಬಹುತೇಕ ಮಳೆಯಾಶ್ರಿತ ಪ್ರದೇಶವಾಗಿದ್ದು ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಮಳೆ ಕೊರತೆ ಕಾರಣ ಶೇ.15 ರಿಂದ 20 ಬಿತ್ತನೆ ಚಟುವಟಿಕೆಗಳು ನಡೆದಿದ್ದು, ನಾಲ್ಕೈದು ವಾರಗಳಿಂದ ಒಣ ಹವೆಯ ಕಾರಣದಿಂದ ಬೆಳಗಳು ಸಂಪೂರ್ಣ ಒಣಗಿವೆ.

ತುಂಗಭದ್ರಾ ಎಡದಂಡೆ ಮುಖ್ಯ ನಾಲೆಯ ಉಪ ನಾಲೆಗಳಿಂದಾಗಿ ಸಿಂಧನೂರು ತಾಲೂಕು ನೀರಾವರಿ ಪ್ರದೇಶವಾಗಿದ್ದರೂ ಸಂಪೂರ್ಣ ನೀರಾವರಿ ವ್ಯಾಪ್ತಿಗೊಳಪಟ್ಟಿಲ್ಲ. ಹಲವು ಹೋಬಳಿಗಳ ಜನರು ಮಳೆಯಾಶ್ರಿತ ಬೆಳೆ ಅವಲಂಬಿಸಿದ್ದಾರೆ. ತಲಾ ಆದಾಯವು ಗಣನೀಯ ಪ್ರಮಾಣದಲ್ಲಿ ಕಡಿಮೆ ಇದೆ.

ತಾಲೂಕಿನ ಅಲಬನೂರು, ಬಾದರ್ಲಿ, ಬಸಾಪುರ, ಬೂತಲದಿನ್ನಿ, ಚನ್ನಳ್ಳಿ, ದೇವರಗುಡಿ, ಗೋನ್ವಾರ, ಗುಂಜಳ್ಳಿ, ಜವಳಗೇರಾ, ಕಲ್ಮಂಗಿ, ಮಾಡಸಿರವಾರ, ಮುಕ್ಕುಂದ, ರಾಗಲಪರ್ವಿ, ರಾಮತ್ನಾಳ, ಉಮಲೂಟಿ, ಒಳಬಳ್ಳಾರಿ ಇತರ ಗ್ರಾಪಂ ವ್ಯಾಪ್ತಿಯ ಮಳೆಯಾಶ್ರಿತ ಭೂಪ್ರದೇಶದಲ್ಲಿ ನಿರೀಕ್ಷೆಯಂತೆ ಬಿತ್ತನೆಯಾಗಿಲ್ಲ. ಕೂಡಲೇ ಮಸ್ಕಿ ಮತ್ತು ಸಿಂಧನೂರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎರಡು ತಾಲೂಕು ವ್ಯಾಪ್ತಿಯಲ್ಲಿ ಅಲ್ಪ-ಸ್ವಲ್ಪ ಮಳೆಗೆ ಬಿತ್ತನೆ ಮಾಡಿ ನಷ್ಟ ಎದುರಿಸುತ್ತಿರುವ ರೈತರ ಜಮೀನುಗಳ ಸಮಗ್ರ ಸರ್ವೇ ನಡೆಸಿ, ಬೆಳೆ ಪರಿಹಾರ ಒದಗಿಸಬೇಕು. ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಬರನಿರ್ವಹಣೆ ಕೈಪಿಡಿ-2020 ಮಾನದಂಡಗಳಲ್ಲಿನ ಸಮಸ್ಯೆಗಳನ್ನು ಸರಿಪಡಿಸಬೇಕು. ಕೇಂದ್ರ ಸರ್ಕಾರದ ಬರ ಘೋಷಣೆ ಮಾನದಂಡಗಳು ಎಲ್ಲ ವಲಯಗಳಿಗೂ ಏಕರೂಪವಾಗಿದ್ದು, ಇದು ಬರ ಘೋಷಣೆಗೆ ಅಗತ್ಯವಾದ ಸೂಕ್ಷ್ಮಗಳು ಮತ್ತು ಬದಲಾವಣೆಗಳನ್ನು ಒಳಗೊಳ್ಳುವುದಿಲ್ಲ.

ವಲಯವಾರು ನಿರ್ದಿಷ್ಟವಾದ ಸೂಚ್ಯಂಕಗಳನ್ನು ಬರ ಘೋಷಣೆಗೆ ರೂಪಿಸಬೇಕು. ರೈತರು ಬೆಳೆ ವಿಮೆ ಪಡೆಯಲು ಸಾಕಷ್ಟು ತಾಂತ್ರಿಕ ಸಮಸ್ಯೆಗಳಿದ್ದು ಅವುಗಳನ್ನು ಸರಳೀಕರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net