

ಸಿಂಧನೂರು: ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಹೇಳಿದರು.
ನಗರಸಭೆಯ ಸಭಾಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಗಾಳಿ, ನೀರು, ಆಹಾರದಷ್ಟೇ ಸ್ವಚ್ಛತೆಯೂ ಮುಖ್ಯ. ನಗರ ಸ್ವಚ್ಛವಾಗಿದ್ದರೆ ಸಾರ್ವಜನಿಕರ ಆರೋಗ್ಯ ಸಹ ಕಾಪಾಡಬಹುದಾಗಿದೆ. ಕೊರತೆಯ ನಡುವೆಯೂ ಪೌರಕಾರ್ಮಿಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿಂಧನೂರು ಅತ್ಯಂತ ಸ್ವಚ್ಛ ನಗರ ಎಂದು ಖ್ಯಾತಿಗೆ ಪಾತ್ರವಾಗಿದೆ. ಗೃಹ ಭಾಗ್ಯ ಯೋಜನೆಯಡಿ ನಿವೇಶನ ಹಾಗೂ ಮನೆ ನಿರ್ಮಾಣ, ಸಹಾಯಧನ ವಿತರಣೆ, ಆರೋಗ್ಯ ತಪಾಸಣೆ, ನಿಗದಿತ ಸಮಯಕ್ಕೆ ವೇತನ ಪಾವತಿಗೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದರು.
ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, ಪೌರಕಾರ್ಮಿಕರು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ನಗರಸಭೆ ಸದಸ್ಯರಿಗೆ ಒಳ್ಳೆಯ ಹೆಸರು ಬರುತ್ತದೆ. ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಅಗತ್ಯವಾಗಿದೆ. ಪೌರ ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೌರ ಸೇವಾ ನೌಕರರಿಗೆ ಪ್ರೋತ್ಸಾಹ ಧನ ಹಾಗೂ ಸಮವಸ್ತ್ರ ವಿತರಣೆ ಮಾಡಲಾಯಿತು. ಪೌರ ಕಾರ್ಮಿಕರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ ಪೌರಕಾರ್ಮಿಕರನ್ನು ಗೌರವಿಸಲಾಯಿತು.
ಪೌರ ನೌಕರರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ದುರುಗಪ್ಪ ಹಸಮಕಲ್, ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಬಂಡಿ, ಸಂಘದ ಗೌರವಾಧ್ಯಕ್ಷ ಸೈಯದ್ ಮನ್ಸೂರು, ಜಿಲ್ಲಾ ಉಪಾಧ್ಯಕ್ಷ ಅಬ್ದುಲ್, ಸದಸ್ಯರಾದ ಕೆ.ಜಿಲಾನಿಪಾಷಾ, ಚಂದ್ರಶೇಖರ ಮೈಲಾರ, ಡಿ.ಸತ್ಯನಾರಾಯಣ, ಶರಣಪ್ಪ ಉಪ್ಪಲದೊಡ್ಡಿ, ಮುನೀರ್ ಪಾಷಾ, ಮಂಜುಳಾ ಪ್ರಭುರಾಜ ಇತರರಿದ್ದರು.