ಸಿಂಧನೂರಿಗೆ 10 ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆ

Untitled design (62)
ಮಂಜುನಾಥ ಗುಂಡೂರು
Published on

ಸಿಂಧನೂರು: ಮುಂದಿನ ದಿನಗಳಲ್ಲಿ ನಗರಕ್ಕೆ 10 ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆ ಮಾಡಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮನವಿ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿ, ನಗರಸಭೆಯು ಮೂರು ಜಲ ಮೂಲಗಳನ್ನು ಹೊಂದಿದೆ. ತುಂಗಭದ್ರಾ ಎಡದಂಡೆ ಕಾಲುವೆಯ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಗರಸಭೆಯು ವಾರಕ್ಕೊಮ್ಮೆ ಕುಡಿಯುವ ನೀರನ್ನು ಪೂರೈಸುತ್ತಿದ್ದು, ನೀರಿನ ಲಭ್ಯತೆಯ ಆಧಾರದ ಮೇಲೆ ಮತ್ತೆ ಎರಡು ದಿನಗಳನ್ನು ವಿಸ್ತರಿಸಿದೆ. ಇನ್ನೂ ಮುಂದೆ ನಗರಸಭೆಯು ತುಂಗಭದ್ರಾ ಎಡದಂಡೆ ಕಾಲುವೆಗೆ ನೀರುಹರಿಸುವವರೆಗೂ 10 ದಿನಗಳಗೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ಮೂರು ಕೆರೆಗಳಲ್ಲಿ ಒಟ್ಟು ನೀರಿನ ಪ್ರಮಾಣವನ್ನಾಧರಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ನಗರದ ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಸಲು ಹಾಗೂ ನಳಗಳಲ್ಲಿ ನೀರು ಪೋಲಾಗದಂತೆ ಜಾಗೃತಿ ವಹಿಸಲು ಸೂಚಿಸಿದೆ ಎಂದು ಮಾಹಿತಿ ನೀಡಿದರು.
ಕಡ್ಡಾಯವಾಗಿ ಎಲ್ಲ ಸಾರ್ವಜನಿಕರು ಮನೆಯ ನಳ ಸಂಪರ್ಕ ಬಾಕಿ ಮೊತ್ತವನ್ನು ನಗರಸಭೆಗೆ ಭರಿಸಬೇಕು. ಒಂದು ವೇಳೆ ಸಾರ್ವಜನಿಕರು ನೀರನ್ನು ಅಪವ್ಯಯವಾಗಿ ಬಳಸಿದ್ದು ಕಂಡು ಬಂದಲ್ಲಿ ಹಾಗೂ ನಳ ಸಂಪರ್ಕದ ಬಾಕಿಯನ್ನು ಭರಿಸದಿದ್ದಲ್ಲಿ ಅವರ ನಳ ಸಂಪರ್ಕವನ್ನು ಕಡಿತಗೊಳಿಸಿ ಕರ್ನಾಟಕ ಪೌರ ಅಧಿನಿಯಮದಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರಸಭೆಯು ಪೂರೈಸುತ್ತಿರುವ ಕುಡಿಯುವ ನೀರು ಅತ್ಯಂತ ಶುದ್ಧವಾಗಿದ್ದು ಜನತೆ ಆತಂಕ ಪಡಬೇಕಿಲ್ಲ. ಪ್ರತಿ ದಿನಾಲೂ ನೀರು ಸರಬರಾಜು ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿದ್ದು ನೀರಿಗೆ ನಿಗದಿತ ಪ್ರಮಾಣದಲ್ಲಿ ಕ್ಲೋರಿನೇಶನ್ ಮಾಡಲಾಗುತ್ತಿದೆ. ಹಾಗೂ ಪ್ರತಿ ವಾರವೂ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ನೀರು ಕುಡಿಯಲು ಯೋಗ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ಪ್ರಮಾಣ ಪತ್ರ ವಿತರಿಸಿರುತ್ತಾರೆ. ನೀರು ಸರಬರಾಜು ಮಾಡುವ ಸಿಬ್ಬಂದಿ ತಾಂತ್ರಿಕವಾಗಿ ನಿಪುರಣರಾಗಿದ್ದು, ನೀರಿನ ಫಿಲ್ಟರ್ ಮೀಡಿಯಾವನ್ನು ಪ್ರತಿದಿನ ಶುಚಿಗೊಳಿಸುತ್ತಿರುವುದರಿಂದ ನಗರದ ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net