

ಪ್ರಕಟಗೊಳ್ಳದ ಮೀಸಲಾತಿ | ಅಧಿಕಾರವಿಲ್ಲದೆ ದಿನ ದೂಡುತ್ತಿರುವ ಸದಸ್ಯರು
ಸಿಂಧನೂರು: ಸ್ಥಳೀಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಅವಧಿ ಪೂರ್ಣಗೊಂಡು 14 ತಿಂಗಳು ಕಳೆದಿವೆ. ಮೀಸಲಾತಿ ಪ್ರಕಟಗೊಳ್ಳದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನನೆಗುದಿಗೆ ಬಿದ್ದಿದೆ.
ನಗರಸಭೆ ಮೊದಲ ಅವಧಿಗೆ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷರಾಗಿದ್ದ ಮುರ್ತುಜಾ ಅವರ ಅಧಿಕಾರ 2023ರ ಏ.23 ಕ್ಕೆ ಪೂರ್ಣಗೊಂಡಿದೆ. ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಆಡಳಿತ ಮಂಡಳಿ ಇಲ್ಲದೆ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದೆ ಎಂಬುದು ಸದಸ್ಯರ ತಳಮಳಕ್ಕೆ ಕಾರಣವಾಗಿದೆ.
ನಗರಸಭೆ ಸದಸ್ಯರಿಗೆ ಮಾಸಿಕ ಎರಡು ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಆಡಳಿತ ಮಂಡಳಿ ಇಲ್ಲದಿರುವುದರಿಂದ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗದೆ ಸದಸ್ಯರು ಗೌರವಧನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೆ ಸಾಮಾನ್ಯ ಸಭೆಯೂ ನಡೆಯುತ್ತಿಲ್ಲ. ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. 31 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ನ 20 ಸದಸ್ಯರಿದ್ದು, ಜೆಡಿಎಸ್, ಬಿಜೆಪಿಯ ಕೆಲ ಸದಸ್ಯರು ಸಹ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಅಧಿಕಾರವಿಲ್ಲದೆ ಒಂದು ವರ್ಷ ಕಳೆದಿದ್ದು, ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಇದೇ ಸ್ಥಿತಿ ಮುಂದುವರಿದರೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಾಗದೆ, ವಾರ್ಡ್ ಜನರ ಸಮಸ್ಯೆಗೂ ಸ್ಪಂದಿಸದೆ ಗೌರವಧನ ಪಡೆದು ಅಧಿಕಾರ ಮುಗಿಸಿ ಮನೆ ಸೇರುವ ಸ್ಥಿತಿ ಬರಲಿದೆ ಎಂಬುದು ಸದಸ್ಯರ ಅಭಿಪ್ರಾಯವಾಗಿದೆ.
ನಗರಸಭೆಯಲ್ಲಿ ಚುನಾಯಿತ ಆಡಳಿತ ಮಂಡಳಿ ಇದ್ದರೆ ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ನಿರೀಕ್ಷಿತ ಕೆಲಸವನ್ನು ಮಾಡಿಸಬಹುದು. ಈಗಿನ ಸ್ಥಿತಿಯಲ್ಲಿ ಬಹುತೇಕ ಸದಸ್ಯರು ನಗರಸಭೆ ಕಡೆಗೆ ಬರುವುದನ್ನೇ ಬಿಟ್ಟಿದ್ದಾರೆ. ಸಭೆಗಳೂ ನಡೆಯದೆ ಇರುವುದರಿಂದ ವಾರ್ಡ್ ಸಮಸ್ಯೆ ಕುರಿತು ಚರ್ಚಿಸಲು ಕೂಡ ಅವಕಾಶವಿಲ್ಲದಂತಾಗಿದೆ.
ನಗರಸಭೆಯಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲದಿದ್ದರೂ ಸದಸ್ಯರ ಕಾರ್ಯಚಟುವಟಿಕೆ ನಿರಂತರವಾಗಿರುತ್ತದೆ. ವಾರ್ಡ್‌ಗಳಲ್ಲಿ ಸದಸ್ಯರ ಸಲಹೆ ಪಡೆದು ಕೆಲಸ ಮಾಡುತ್ತಿದ್ದೇವೆ. ಸರ್ಕಾರದಿಂದ ಬರುವ ಅನುದಾನಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳ ಸೂಚನೆಯಂತೆ ಕೆಲಸ ಮಾಡಲಾಗುತ್ತಿದೆ.| ಮಂಜುನಾಥ ಗುಂಡೂರು ನಗರಸಭೆ ಪೌರಾಯುಕ್ತ, ಸಿಂಧನೂರು
ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಅಧಿಕಾರ ಅವಧಿ ಮುಗಿದು ಒಂದು ವರ್ಷ ಕಳೆದಿದೆ. ನಗರಸಭೆಯಿಂದ ಗೌರವಧನ ದೊರೆಯುತ್ತಿದ್ದು ನಮ್ಮ ಅಧಿಕಾರ ಅವಧಿಯೂ ಪೂರ್ಣಗೊಳ್ಳುತ್ತಿದೆ. ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೆ ವಾರ್ಡ್‌ಗಳಲ್ಲಿ ಸರಿಯಾದ ಅಭಿವೃದ್ಧಿ ಕೆಲಸವಾಗುತ್ತಿಲ್ಲ.| ಶರಣಪ್ಪ ಉಪ್ಪಲದೊಡ್ಡಿ ನಗರಸಭೆಯ 14ನೇ ವಾರ್ಡ್ ಸದಸ್ಯ, ಸಿಂಧನೂರು