ಗುಂಜಳ್ಳಿ ಪ್ರೌಢ ಶಾಲೆಯಲ್ಲಿ ಶ್ರಾವಣ ದಾಸೋಹ

DHASOHA
ಸಿಂಧನೂರು ತಾಲೂಕಿನ ಗುಂಜಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರಾವಣ ದಾಸೋಹ ಹಿನ್ನೆಲೆಯಲ್ಲಿ ಹೊಳಿಗೆ ಉಣಬಡಿಸಿರುವುದು.
Published on

ಸಿಂಧನೂರು: ತಾಲೂಕಿನ ಗುಂಜಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರಾವಣ ದಾಸೋಹ ಕಾರ್ಯಕ್ರಮ ನಡೆಯುತ್ತಿದ್ದು, ಇದರಿಂದ ಮಕ್ಕಳ ಹಾಜರಾತಿಯಲ್ಲಿ ದಿಢೀರ್ ಏರಿಕೆ ಕಂಡಿದೆ.

ಕಳೆದ ಐದಾರು ದಿನಗಳಿಂದ ಪ್ರೌಢಶಾಲಾ ಮಕ್ಕಳಿಗಾಗಿ ಅಲ್ಲಿನ ಎಸ್ಡಿಎಂಸಿ ಸದಸ್ಯರು, ಶಾಲಾ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಗ್ರಾಪಂ ಸದಸ್ಯರು ಹಾಗೂ ಶಿಕ್ಷಣ ಪ್ರೇಮಿಗಳನ್ನೊಳಗೊಂಡ ತಂಡವು ದಾಸೋಹ ಸೇವೆ ನಡೆಸುತ್ತಿದೆ. ದಿನಕ್ಕೊಂದು ಸಿಹಿ ಜತೆಗೆ ವಿವಿಧ ರೀತಿಯ ಪಲ್ಲೆ, ಚಿತ್ರನ್ನ, ಅನ್ನ-ಸಾಂಬಾರ್ ಸವಿಯುವುದೇ ಒಂದು ರೀತಿಯಲ್ಲಿ ಹಬ್ಬವಾಗಿದೆ. ಈ ಬೆಳವಣಿಗೆಯಿಂದ ಶಾಲೆಗೆ ಬರುವ ಮಕ್ಕಳ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ.

ಈ ಕುರಿತು ಮಾಹಿತಿ ನೀಡಿದ ಮುಖ್ಯಶಿಕ್ಷಕ ನಾಗಪ್ಪ ಬೇರ‌್ಗಿ, ಸಮುದಾಯ ಕೈಜೋಡಿಸಿದರೆ ಯಾವುದೂ ಅಸಾಧ್ಯವಿಲ್ಲ. ಈಗ ನಮ್ಮ ಶ್ರಾವಣ ದಾಸೋಹಕ್ಕೆ ದಾನಿಗಳ ಸಂಖ್ಯೆ ಹೆಚ್ಚಿದೆ. ಕಳೆದ ಐದಾರು ದಿನಗಳಿಂದ ಶ್ರಾವಣ ದಾಸೋಹ ನಡೆಯುತ್ತಿದ್ದು ದಿನಕ್ಕೊಂದು ಸಿಹಿ ಜತೆಗೆ ಅನ್ನ-ಸಾಂಬಾರ್, ವಿವಿಧ ಖಾದ್ಯಗಳನ್ನು ಉಣಬಡಿಸಲಾಗುತ್ತಿದೆ. ಮಕ್ಕಳೊಂದಿಗೆ ನಾವು, ಎಸ್ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯರು, ಶಿಕ್ಷಣ ಪ್ರೇಮಿಗಳು ಊಟ ಮಾಡುತ್ತೇವೆ. ಇದೊಂದು ರೀತಿಯಲ್ಲಿ ಸಡಗರ ಎನಿಸಿದೆ. ಮಕ್ಕಳ ಹಾಜರಾತಿಯಲ್ಲಿ ಏರಿಕೆಯಾಗಿರುವುದು ಖುಷಿ ತಂದಿದೆ ಎಂದರು.

ಸರ್ಕಾರಿ ಪ್ರೌಢ ಶಾಲೆಯಲ್ಲಿಯೂ ಇಂತಹ ದಾಸೋಹ ಪ್ರಕ್ರಿಯೆ ನಡೆಯುತ್ತಿರುವುದು ಇತರ ಶಾಲೆಗಳಿಗೆ ಮಾದರಿ ಎನಿಸಿದೆ. ಈ ಶಾಲೆ ವಿನೂತನ ಮಾರ್ಗದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸ್ಥಾನ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net