

ಸಿಂಧನೂರು: ತಾಲೂಕಿನ ಬೂತಲದಿನ್ನಿ ಗ್ರಾಮದಲ್ಲಿ ಕಲುಷಿತ ಸೇವನೆಯಿಂದ 25 ಜನರಿಗೆ ವಾಂತಿ- ಭೇದಿಯಾಗಿದ್ದು, ಶನಿವಾರ ಆರೋಗ್ಯ ಇಲಾಖೆ ತಂಡ ಭೇಟಿ ನೀಡಿ ರೋಗಿಗಳಿಗೆ ಚಿಕಿತ್ಸೆ ನೀಡಿತು.
ಗ್ರಾಮಕ್ಕೆ ಸಮರ್ಪಕ ಕುಡಿವ ನೀರು ಪೂರೈಕೆಯಾಗದೆ, ಜನರು ಕಲುಷಿತ ನೀರು ಸೇವಿಸಿದ್ದರಿಂದ ಕಳೆದೆರೆಡು ದಿನದಿಂದ ಹೊಟ್ಟೆ ನೋವು ಉಂಟಾಗಿ ವಾಂತಿ ಭೇದಿಯಾಗಿದೆ. 25 ಜನರ ಪೈಕಿ ಈಗಾಗಲೇ 4 ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಇನ್ನಿಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಆರೋಗ್ಯ ತಂಡದೊಂದಿಗೆ ತೆರಳಿ ಅಗತ್ಯ ಚಿಕಿತ್ಸೆ, ಶುದ್ಧ ನೀರು ಸೇವಿಸುವ ಬಗ್ಗೆ ಮಾಹಿತಿ ನೀಡಿದೆ.
ತಾಪಂ ಇಒ ಚಂದ್ರಶೇಖರ, ಜಿಪಂ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ವಿಜಯಲಕ್ಷ್ಮೀ ಭೇಟಿ ನೀಡಿ, ಮಾಹಿತಿ ಪಡೆದರು. ಗ್ರಾಮಕ್ಕೆ ಸಮರ್ಪಕ ಶುದ್ಧ ಕುಡಿವ ನೀರು ಪೂರೈಕೆ ಮಾಡದಿದ್ದಕ್ಕೆ ಗ್ರಾಮಸ್ಥರು ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ಗ್ರಾಮದಲ್ಲಿ ಉಂಟಾಗಿರುವ ವಾಂತಿ-ಭೇದಿ ಪ್ರಕರಣ ಹತೋಟಿಗೆ ಬರಬೇಕು. ಶುದ್ಧ ಕುಡಿವ ನೀರು ಒದಗಿಸಲು ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಶಾಸಕರು ಸೂಚಿಸಿದ್ದಾರೆಂದು ತಿಳಿಸಿದರು.
ಗ್ರಾಮದಲ್ಲಿರುವ ಉಪಪ್ರಾಥಮಿಕ ಆರೋಗ್ಯದಲ್ಲಿ ವಾಂತಿ ಭೇದಿಯಿಂದ ಬಳಲುತ್ತಿರುವರಿಗೆ ವೈದ್ಯರು ಪರೀಕ್ಷೆ ಮಾಡುತ್ತಿದ್ದು, ಓಆರ್‌ಎಸ್ ಮತ್ತು ಮಾತ್ರೆಗಳನ್ನು ನೀಡಿದ್ದಾರೆ. ಇಬ್ಬರು ವೈದ್ಯರು, 4 ಜನ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಿಸಿದ್ದು, ಒಂದು ಆಂಬುಲೆನ್ಸ್ ಹಾಗೂ 5 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ನಿಗಾ ಇಡುತ್ತಿದ್ದು, ಗ್ರಾಮಸ್ಥರು ಆತಂಕ ಪಡಬಾರದು. ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಮನವಿ ಮಾಡಿದರು.
ವಾಂತಿ-ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜನರಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಕುಡಿವ ನೀರಿನ ಸ್ಯಾಂಪಲ್‌ನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ನಂತರವೇ ವಾಂತಿ ಭೇದಿಗೆ ಕಾರಣ ಗೊತ್ತಾಗಲಿದೆ. | ಚಂದ್ರಶೇಖರ ಇಒ ತಾಪಂ ಸಿಂಧನೂರು