

ಸಿಂಧನೂರು: ಶ್ರೀದೇವಿ ಮಹಾತ್ಮೆ ಗ್ರಂಥವು ಕಲಿಯುಗದ ಕಾಮಧೇನು. ಇದನ್ನು ಪಠಣ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಬಪ್ಪೂರ ಶಾಂಭವಿ ಮಠದ ದೇವಯ್ಯಸ್ವಾಮಿ ಹೇಳಿದರು.
ತಾಲೂಕಿನ ಅಂಬಾಮಠದ ಶ್ರೀ ಅಂಬಾದೇವಿ ದೇವಸ್ಥಾನದಲ್ಲಿ ಚತುರ್ವಾದ ಪುರೋಹಿತ ಬಳಗವು ಲೋಕ ಕಲ್ಯಾಣಾರ್ಥ ಹಾಗೂ 3ನೇ ವರ್ಷದ 11 ದಿನಗಳ ಮೌನಾನುಷ್ಠಾನದ ಮಂಗಲ ನಿಮಿತ್ತ ಹಮ್ಮಿಕೊಂಡಿದ್ದ ಚಂಡಿ ಹೋಮ, ಗಾಯತ್ರಿ ಹೋಮ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ನಾಡಿನಲ್ಲಿ ಅನೇಕರು ಸಂತ, ಮಹಾಂತರಾಗಿ ಹೋಗಿದ್ದಾರೆ. ಎಲ್ಲರೂ ಮನುಕುಲದ ಒಳಿಗಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಅಂಧಕಾರವನ್ನು ಅಳಿಸಿ ಹಾಕಿ, ಬೆಳಕನ್ನು ಶ್ರೀ ಅಂಬಾದೇವಿ ನೀಡಿದ್ದಾಳೆ. ಆ ಬೆಳಕಿನಲ್ಲಿ ಎಲ್ಲರ ಬದುಕು ಬೆಳಗುತ್ತಿದೆ. ಪ್ರಸ್ತುತ ಪರಿಪೂರ್ಣ ಜೀವನ ಪಡೆಯಲು ಸಾಧ್ಯವಾಗುತ್ತಿದೆ. ಧರ್ಮದಲ್ಲಿ ನಂಬಿಕೆ ಇಡಬೇಕು. ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ತುರ್ವಿಹಾಳ ಪುರವರಮಠದ ಅಮರಗುಂಡಯ್ಯಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪುರೋಹಿತ ಬಳಗ ಲೋಕ ಕಲ್ಯಾಣಾರ್ಥ ಕೈಗೊಂಡ ಮೌನಾನುಷ್ಠಾನದಿಂದ ಎಲ್ಲರಿಗೂ ಒಳ್ಳೆಯದಾಗಲಿದೆ ಎಂದರು. ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಮಾತನಾಡಿದರು.
ಶಿವಾಚಾರ್ಯ ಗಿಣಿವಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಂಗಾರಿಕ್ಯಾಂಪ್ ಸಿದ್ದರಾಮಶರಣರು, ಯಾದಗಿರಿ ವೀರೇಶ ಶರಣರು, ಬಸವರಾಜಸ್ವಾಮಿ ಕೆ.ಹೊಸಳ್ಳಿ, ಪಂಚಯ್ಯಸ್ವಾಮಿ ಮಾಡಸಿರವಾರ, ಅರುಣಕುಮಾರಸ್ವಾಮಿ ಕೈರವಾಡಗಿ, ಮೃತ್ಯುಂಜಯಸ್ವಾಮಿ ಗುಂಜಳ್ಳಿ, ಅಮರಯ್ಯಸ್ವಾಮಿ ಎಲೆಕೂಡ್ಲಿಗಿ ಇದ್ದರು. ಅಮರಯ್ಯಸ್ವಾಮಿ ಕರೆಗುಡ್ಡ ಕಾರ್ಯಕ್ರಮ ನಿರೂಪಿಸಿದರು. ಅಮರೇಶ ಚಿಕ್ಕಕೊಟ್ನೆಕಲ್, ಹನುಮಂತ ಚಿಕ್ಕಕೊಟ್ನೆಕಲ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.