ಜನರ ಮನೆ ಬಾಗಿಲಿಗೆ ಯೋಜನೆ; ಕ.ಕ. ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನಿರ್ದೇಶಕಿ ಲೀಲಾ ಹೇಳಿಕೆ

19082022 sindhanoor news
Published on


ಸಿಂಧನೂರು: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದಿಂದ 5 ಲಕ್ಷ ಜನರ ಮನೆ ಬಾಗಿಲಿಗೆ ಯೋಜನೆಗಳನ್ನು ತಲುಪಿಸಲಾಗಿದೆ. ಯೋಜನೆಗಳ ಸದ್ಬಳಕೆಯಾದರೆ ಸಂಘದ ಉದ್ದೇಶ ಸಾರ್ಥಕವಾಗಲಿದೆ ಎಂದು ಸಂಘದ ನಿರ್ದೇಶಕಿ ಲೀಲಾ ಮಲ್ಲಿಕಾರ್ಜುನ ಹೇಳಿದರು.

ಕರಿಬಸವನಗರದಲ್ಲಿರುವ ಬಾಳೆಹೊನ್ನೂರು ರಂಭಾಪುರಿ ಶಾಖಾಮಠದ ಆವರಣದಲ್ಲಿ ಸಂಘದಿಂದ 22.10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸಾಂಸ್ಕೃತಿಕ ಭವನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಸಂಘದ ಮುಖ್ಯಸ್ಥ ಬಸವರಾಜ ಪಾಟೀಲ್ ಸೇಡಂ ಮಾರ್ಗದರ್ಶನದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದರಂತೆ 5 ಸಾವಿರ ಪ್ರಗತಿ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ 25 ವಿದ್ಯಾರ್ಥಿಗಳಿಗೆ ಒಂದು ತಾಸು ಪಾಠ ಹೇಳಿಕೊಡಲಾಗುತ್ತದೆ. 2 ಸಾವಿರ ಕೌಶಲ ಕೇಂದ್ರ ತೆರೆದು ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡಿ, 5 ಹೊಲಿಗೆ ಯಂತ್ರ ನೀಡಲಾಗುತ್ತಿದೆ ಎಂದರು.

ಸಂಘದ ನಿರ್ದೇಶಕ ಈರೇಶ ಇಲ್ಲೂರು ಮಾತನಾಡಿ, ಬಸವರಾಜ ಪಾಟೀಲ್ ಸೇಡಂ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಿಂದ 10 ವರ್ಷದಲ್ಲಿ 100 ಕೋಟಿ ರೂಪಾಯಿಯನ್ನು 6 ಜಿಲ್ಲೆಗಳಿಗೆ ಹಂಚಿಕೆ ಮಾಡಿ ಶೈಕ್ಷಣಿಕ ಸುಧಾರಣೆ ಒಳಗೊಂಡಂತೆ ಸಮಾಜಮುಖಿ ಕೆಲಸ ಕೈಗೊಂಡಿದ್ದಾರೆ ಎಂದು ಹೇಳಿದರು. ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net