

ಸಿಂಧನೂರು: ಕಾರ್ಪೋರೇಟ್ ಧಣಿಗಳಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ರಾಷ್ಟೀಯ ಶಿಕ್ಷಣ ನೀತಿ-2020 ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದರಿಂದ ಬರುವ ದಿನಗಳಲ್ಲಿ ದೇಶದಲ್ಲಿ ತಳ ಸಮುದಾಯಗಳ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತಗೊಂಡು ನಿರುದ್ಯೋಗ ತಾಂಡವವಾಡಲಿದೆ ಎಂದು ಎಎಸ್‌ಐಎ ರಾಜ್ಯ ಸಂಚಾಲಕಿ ಲೇಖಾ ಅಡವಿ ಹೇಳಿದರು.
ನಗರದ ಸಮುದಾಯ ಭವನದಲ್ಲಿ ಎಎಸ್‌ಐಎ (ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ) ರಾಜ್ಯ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ‘ಕಲಿಕೆಯ ಬಿಕ್ಕಟ್ಟು ಕರ್ನಾಟಕದಲ್ಲಿ ಶಿಕ್ಷಣದ ಸ್ಥಿತಿಗಳು’ ಕುರಿತ ಸಮಾವೇಶದಲ್ಲಿ ಮಾತನಾಡಿದರು.
ಎನ್‌ಇಪಿ ಕರಡಿನಲ್ಲಿ ಡಿಜಿಟಲ್, ಆನ್‌ಲೈನ್ ಶಿಕ್ಷಣದ ಕುರಿತು ಪದೇ ಪದೆ ಪ್ರಸ್ತಾಪಿಸಲಾಗಿದೆ. ಆದರೆ, ಮೀಸಲಾತಿ ಬಗ್ಗೆ ಎಲ್ಲಿಯೂ ಚಕಾರವೆತ್ತಿಲ್ಲ. ಸಾರ್ವಜನಿಕ ಶಿಕ್ಷಣದ ಬಲ ಕುಗ್ಗಿಸುವ ಭಾಗವಾಗಿಯೇ ಈ ನೀತಿಯನ್ನು ತರಲಾಗುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಆನ್‌ಲೈನ್ ಶಿಕ್ಷಣ ಕಂಪನಿ ಇಂದು ಸಾವಿರಾರು ಕೋಟಿ ರೂ. ವ್ಯವಹಾರ ಮಾಡಿದೆ. ಅದರ ಮಾಲೀಕರು ಮೂರ್ನಾಲ್ಕು ವರ್ಷದಲ್ಲಿಯೇ ಕೋಟ್ಯಾಧೀಶರಾಗಿದ್ದಲ್ಲದೇ ಕ್ರಿಕೆಟ್ ಪ್ರಾಂಚೈಸಿಗಳನ್ನು ಕೊಳ್ಳುವ ಹಂತಕ್ಕೆ ಬೆಳೆದಿದ್ದಾರೆ.
ಬಡವರಿಗೆ ಆನ್‌ಲೈನ್ ಶಿಕ್ಷಣ ಹೇರಲಾಗುತ್ತಿದ್ದು, ದೊಡ್ಡವರ ಮಕ್ಕಳು ಆಕ್ಸ್ಫರ್ಡ್, ಕೆಂಬ್ರಿಡ್ಜ್ ಸೇರಿದಂತೆ ಜಗತ್ತಿನ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಉಪನ್ಯಾಸಕ ಶಂಕರ್ ವಾಲೇಕಾರ್ ಮಾತನಾಡಿ, ದೇಶ ನಡೆಯುತ್ತಿರುವುದು ಜನರ ಶ್ರಮದಿಂದ ಹೊರತು, ಕಾರ್ಪೋರೇಟ್ ಕಂಪನಿಗಳಿಂದಲ್ಲ. ಶಿಕ್ಷಣ ಖಾಸಗೀಕರಣದಿಂದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಗಗನ ಕುಸುಮವಾಗಿದೆ.
ಸಾಮ್ರಾಜ್ಯಶಾಹಿ ಸಂಸ್ಕೃತಿ ವಿದ್ಯಾರ್ಥಿಗಳ ಮೆದುಳಿಗೆ ಕೈಹಾಕುತ್ತಿದೆ. ಶೈಕ್ಷಣಿಕ ಪಠ್ಯವನ್ನು ಕೇಸರೀಕರಣಗೊಳಿಸಲಾಗಿದ್ದು, ಕಾರ್ಪೋರೇಟ್ ಶಿಕ್ಷಣ ನೀತಿಯನ್ನು ಪಠ್ಯಕ್ಕೆ ಅಳವಡಿಸಿ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದರು.
ಉಪನ್ಯಾಸಕಿ ವಿಜಯಲಕ್ಷ್ಮೀ ಗುರಿಕಾರ ಮಾತನಾಡಿದರು. ರಾಜ್ಯ ಸಂಚಾಲಕ ಸಮಿತಿ ಸದಸ್ಯ ಸಂತೋಷ ಗುಳೇದಹಟ್ಟಿ, ಬೆಂಗಳೂರು ಅಧ್ಯಕ್ಷ ಸಚಿನ್ ಕುಮಾರ್, ಚಿತ್ರದುರ್ಗ ಸಂಚಾಲಕ ನಾಗರಾಜ ಆಚಾರ, ವಿಜಯನಗರ ಸಂಚಾಲಕ ಮೋಹನ್, ಕೊಪ್ಪಳ ಸಂಚಾಲಕಿ ನೇತ್ರಾವತಿ, ದಾವಣಗೆರೆ ಸಂಚಾಲಕ ದೇವರಾಜ, ರಾಯಚೂರು ಸಂಚಾಲಕ ಯಮನೂರು, ಪ್ರದೀಪ್ ಹಾಗೂ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.