

ಸಿಂಧನೂರು: ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗದೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ರೂಪಾ ಸಿ.ವಗ್ಗ ಹೇಳಿದರು.
ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ನಿಮಿತ್ತ ನಗರದ ಶ್ರೀ ವಿ.ಸಿ.ಬಿ ಪದವಿ ಪೂರ್ವ ಹಾಗೂ ನ್ಯಾಷನಲ್ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ‘ಮಾದಕವಸ್ತು ಮುಕ್ತ ಭಾರತಕ್ಕಾಗಿ ಮಾದಕ ವಸ್ತು ಜಾಗೃತಿ’ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೌವನಾವಸ್ಥೆಯಲ್ಲಿನ ಚಾಂಚಲ್ಯ ದಾರಿ ತಪ್ಪುವಂತೆ ಮಾಡುತ್ತದೆ. ಆದರೆ, ಯಾರೊಬ್ಬರೂ ಧೃತಿಗೆಡದೆ ಉತ್ತಮ ಗುರಿಯತ್ತ ಮುನ್ನುಗ್ಗಬೇಕು. ಯುವ ಸಮೂಹ ದೇಶದ ಉನ್ನತಿಯಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಶಿಕ್ಷಕರು ಹೇಳುವ ಮಾತನ್ನು ಕೇಳಬೇಕು.
ವಿದ್ಯಾರ್ಥಿಗಳು ಉತ್ತಮ ಮಾರ್ಗದಲ್ಲಿ ನಡೆದರೆ ಜೀವನಪೂರ್ತಿ ನೆಮ್ಮದಿಯಾಗಿರಬಹುದು. ಇಲ್ಲವಾದರೆ, ಇಡೀ ಜೀವನ ಕಷ್ಟದಲ್ಲಿ ದೂಡಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯ ಏರುಪೇರಾಗುತ್ತದೆ. ದುಶ್ಚಟಗಳು ನಮ್ಮನ್ನು ಆರ್ಥಿಕ ಹಾಗೂ ಮಾನಸಿಕವಾಗಿ ಕುಗ್ಗಿಸುತ್ತವೆ. ಜೀವನಪೂರ್ತಿ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಸರ್ಕಾರಿ ಸಹಾಯಕ ಅಭಿಯೋಜಕ ಹನುಮೇಶ ರಾಗಲಪರ್ವಿ, ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ ಬೈರದೊರೆ, ಖಜಾಂಚಿ ಶರಣಬಸವ ಉಮಲೂಟಿ, ಶ್ರೀ ವಿ.ಸಿ.ಬಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಚಂದ್ರಶೇಖರ ಬೆನ್ನೂರು ವಕೀಲ, ಪ್ರಾಚಾರ್ಯ ರಾಮಲಿಂಗಯ್ಯ ಎಚ್., ಕಾರ್ಯದರ್ಶಿ ರವಿಕುಮಾರ ಎಸ್. ಮಸ್ಕಿ, ಉಪನ್ಯಾಸಕ ಮಹೇಶ ಹಿರೇಮಠ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು.