

ಸಿಂಧನೂರು: ಯುವಕರು ದುಶ್ಚಟದಿಂದ ದೂರವಿದ್ದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಡಿವೈಎಸ್ಪಿ ಎಸ್.ಬಿ.ತಳವಾರ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ವಸ್ತು ಮತ್ತು ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಇದರಿಂದ ಸಮಾಜದಲ್ಲಿ ಅನೇಕ ಕಡೆ ಹೆಚ್ಚು ಅಪರಾಧಗಳು ನಡೆಯುತ್ತಿವೆ. ಚೆನ್ನಾಗಿ ಓದಿ, ವಿದ್ಯಾವಂತರಾಗಿ ತಂದೆ-ತಾಯಿಗೆ ಕೀರ್ತಿ ತರಬೇಕು ಎಂದರು.
ಬಳ್ಳಾರಿ ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ, ಪತಂಜಲಿ ಯೋಗ ಸಮಿತಿ ಸಂಚಾಲಕ ಎಂ.ಭಾಸ್ಕರ್ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಉತ್ತಮ ಹವ್ಯಾಸಗಳಿಂದ ಆರೋಗ್ಯ ವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಯೋಗಾಭ್ಯಾಸ ಉತ್ತಮ ಪ್ರಯೋಜನವನ್ನು ನೀಡುತ್ತದೆ ಎಂದರು.
ಪ್ರಾಚಾರ್ಯ ಪಾಂಡು, ಕ್ಷೇತ್ರ ಯೋಜನಾಧಿಕಾರಿ ವಿನಾಯಕ, ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಅನಿಲ್‌ಕುಮಾರ, ಸಹಾಯಕ ಪ್ರಾಧ್ಯಾಪಕ ಸಿದ್ದರಾಮರೆಡ್ಡಿ, ವಲಯ ಮೇಲ್ವಿಚಾರಕ ಪರಶುರಾಮ, ಸೇವಾಪ್ರತಿನಿಧಿ ವಿದ್ಯಾ ಇದ್ದರು.