ಅಂಬಾಮಠದ ಸಮಗ್ರ ಅಭಿವೃದ್ಧಿಗೆ ಆದ್ಯತೆ

snd-1
ಸಿಂಧನೂರು ತಾಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. ಎಂಎಲ್ಸಿ ಬಸನಗೌಡ ಬಾದರ್ಲಿ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ, ತಹಸೀಲ್ದಾರ್ ಅರುಣ್ ದೇಸಾಯಿ ಇದ್ದರು.
Published on

ಸಿಂಧನೂರು: ಐದು ನೂರು ವರ್ಷಗಳ ಇತಿಹಾಸ ಹೊಂದಿರುವ ಅಂಬಾಮಠವನ್ನು ಯಾತ್ರಾ ಸ್ಥಳವನ್ನಾಗಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ತಾಲೂಕಿನ ಅಂಬಾಮಠ ಗ್ರಾಮದಲ್ಲಿ ಅಂಬಾದೇವಿ ದೇವಸ್ಥಾನದ ಶಿಲಾಮಂಟಪ ಕಾಮಗಾರಿಯನ್ನು ಶನಿವಾರ ವೀಕ್ಷಣೆ ಮಾಡಿ, ನಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ 18 ಶಕ್ತಿ ಪೀಠಗಳ ಪೈಕಿ ಕರ್ನಾಟಕದಲ್ಲಿರುವ ಏಕೈಕ ಶಕ್ತಿ ಪೀಠ ಅಂಬಾಮಠವಾಗಿದೆ.

ಇಲ್ಲಿನ ಅಭಿವೃದ್ಧಿ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ. ಶಿಲಾಮಂಟಪ ಅಭಿವೃದ್ಧಿಗೆ 15 ಕೋಟಿ ರೂ., ಅಂಬಾಮಠಕ್ಕೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಐದು ಕೋಟಿ ರೂ.ಗೂ ಅಧಿಕ ಅನುದಾನವಿದೆ.

ಸವದತ್ತಿ ಹಾಗೂ ಹುಲಿಗಿಗೆ ಆದ್ಯತೆ ನೀಡಿದಂತೆ ಅಂಬಾಮಠದ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಅನುದಾನ ಒದಗಿಸುವ ವಿಶ್ವಾಸವಿದೆ ಎಂದರು.

ಜಾತ್ರೆ ಆರಂಭಕ್ಕೂ ಮೊದಲೇ ನಿಗದಿತ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ಏಜೆನ್ಸಿಗೆ ಸೂಚಿಸಲಾಗಿದೆ.

ಮೊದಲ ಹಂತದ ಕಾಮಗಾರಿ ಬಳಿಕ ಬಾಕಿ ಕೆಲಸವನ್ನು ಹಂತ-ಹಂತವಾಗಿ ಮಾಡಲಾಗುತ್ತದೆ. ಎರಡು ಪ್ರಸಾದ ನಿಲಯ, ಕೆರೆ, ತೇರು ಬೀದಿ ಸೇರಿ ಸರ್ವಾಂಗೀಣ ಅಭಿವೃದ್ಧಿಯ ಚಿಂತನೆ ಇದೆ. ಕೇಂದ್ರ ಸರ್ಕಾರದ ಪ್ರಸಾದ-2 ಯೋಜನೆಯಡಿ ಅನುದಾನ ಪಡೆಯಲು ಡಿಪಿಆರ್ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಎಂಎಲ್ಸಿ ಬಸನಗೌಡ ಬಾದರ್ಲಿ ಮಾತನಾಡಿ, ಅಂಬಾದೇವಿ ದೇವಸ್ಥಾನದ ಗರ್ಭಗುಡಿ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ನೀಡಲಾಗುವುದು ಎಂದರು.

ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ, ಅಂಬಾಮಠ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ರಂಗನಗೌಡ ಗೊರೇಬಾಳ, ತಹಸೀಲ್ದಾರ್ ಅರುಣ್ ದೇಸಾಯಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಅನಿಲ್‌ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net