

ಸಿಂಧನೂರು: ನಗರದ ರಾಯಚೂರು-ಸಿಂಧನೂರು ಹೆದ್ದಾರಿ ಸೇತುವೆ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಕಾಟಾಚಾರದ ದುರಸ್ತಿಯಿಂದ ಅನುಕೂಲ ಬದಲು ಅನಾನುಕೂಲವೇ ಹೆಚ್ಚಾಗಿ, ಸಂಚಾರ ಸಂಕಷ್ಟ ಎದುರಾಗಿದೆ.
ರಾಯಚೂರು, ಗುಲ್ಬರ್ಗಾಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಸೇತುವೆ ಮೇಲಿನ ರಸ್ತೆ ಹಲವು ವರ್ಷಗಳಿಂದ ದುರಸ್ತಿ ಕಂಡಿಲ್ಲ. ಡಾಂಬರ್ ಕಿತ್ತಿ ಹೋಗಿ ಕಂದಕಗಳು ಸೃಷ್ಟಿಯಾಗಿದ್ದು ಸೇತುವೆ ಬಹಳ ಕಿರಿದಾಗಿರುವುದರಿಂದ ಎಡ ಮತ್ತು ಬಲಬದಿ ಬರುವ ವಾಹನಗಳ ಸಂಕಷ್ಟ ಹೇಳತೀರಾಗಿದೆ. ದಿನಕ್ಕೊಂದು ಅಪಘಾತ ನಡೆಯುತ್ತವೆ.
ಅರ್ಧ ಕಿಮೀ ಅಂತರದಲ್ಲಿರುವ ಸೇತುವೆ ಮುಖ್ಯ ರಸ್ತೆ ಮೇಲೆ ಸಂಚಾರಕ್ಕೆ ಹೆದರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳ ಹಿಂದೆ ರಸ್ತೆಗೆ ಕಾಟಾಚಾರಕ್ಕೆ ಎರಡು ಪುಟ್ಟಿಯಷ್ಟು ಡಾಂಬರ್ ಹಾಕಿ ಕೈತೊಳೆದುಕೊಳ್ಳಲಾಗಿದ್ದು, ಇನ್ನೂ ಹುತೇಕ ಕಡೆಗಳಲ್ಲಿ ಹಾಳಾದ ರಸ್ತೆಯಲ್ಲಿ ಸಂಚಾರ ನರಕವಾಗಿದೆ. ಸೇತುವೆ ಮೇಲೆ ವಾಹನ ಹೋಗುತ್ತಿದ್ದಂತೆ ಕಲ್ಲಲ್ಲಿ, ಕಂದಕದಲ್ಲಿ ಸಂಚರಿಸಿದ ಅನುಭವ ನೀಡುತ್ತಿದೆ.
ಎರಡು ವರ್ಷಗಳ ಹಿಂದೆಯೇ ಸೇತುವೆ ವಿಸ್ತರಣೆ ಕಾಮಗಾರಿ ನಡೆದಿದ್ದು, ಇದುವರೆಗೆ ಮುಗಿಯುವ ಹಂತ ತಲುಪಿಲ್ಲ. ಕಾಮಗಾರಿ ವಿಳಂಬ ಹಾಗೂ ಕಿರಿದಾದ ಸೇತುವೆ ಮೇಲೆ ವಾಹನಗಳ್ನು ಸಂಕಷ್ಟದಿಂದ ಚಲಿಸುವಂತಾಗಿದೆ. ಒಂದು ಬದಿಯ ಕಾಮಗಾರಿ ವೇಗ ಹೆಚ್ಚಿದ್ದು ಇನ್ನೊಂದು ಬದಿಯ ಕೆಲಸ ಈಗ ಆರಂಭಿಸಲಾಗಿದೆ. ಈ ಸೇತುವೆ ನೆಪದಲ್ಲಿ ಹಳೇ ಸೇತುವೆ ಮೇಲಿನ ರಸ್ತೆ ನಿರ್ಮಾಣ ಕೈಬಿಡಲಾಗಿದೆ.
ವಿಸ್ತರಣೆ ಸೇತುವೆ ಕಾಮಗಾರಿ ಯಾವಾಗಲಾದರೂ ಮುಗಿಯಲಿ. ಈಗಿರುವ ಹಳೇ ಸೇತುವೆ ಮೇಲಿನ ಅರ್ಧ ಕಿಮೀ ರಸ್ತೆಗೆ ಬಾಂಬರ್ ಹಾಕಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.
ಸಿಂಧನೂರು-ರಾಯಚೂರು ಹೆದ್ದಾರಿ ಮಧ್ಯದ ಸೇತುವೆ ಮೇಲಿನ ರಸ್ತೆ ಹಾಳಾಗಿರುವುದು ಗಮನಕ್ಕಿದೆ. ವಿಸ್ತರಣೆ ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ದುರಸ್ತಿ ವಿಳಂಬವಾಗಿದೆ. ಈಗಾಗಲೇ ಹಾಳದ ಕಡೆಗಳಲ್ಲಿ ತಾತ್ಕಾಲಿಕ ಡಾಂಬರ್ ಹಾಕುವಂತೆ ಸೂಚಿಸಲಾಗಿದ್ದು, ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲಾಗುವುದು.ವಿಜಯಕುಮಾರ ಪಾಟೀಲ್ ಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಿಜಯಪುರ ಸಿಂಧನೂರು-ರಾಯಚೂರು ಮಾರ್ಗ ಮಧ್ಯದ ಸೇತುವೆ ಮೇಲಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಗುಂಡಿಗೆ ಬೇಕು. ರಸ್ತೆ ಸಂಪೂರ್ಣ ಹಾಳಾಗಿದ್ದು ಕಂದಕಗಳು ಬಿದ್ದಿವೆ. ಈ ಬಗ್ಗೆ ಯಾರು ತಲೆಕೆಡಿಸಿಕೊಂಡಿಲ್ಲ. ಈಗಾಗಲೇ ಅನೇಕ ಅವಘಡಗಳು ಸಂಭವಿಸಿವೆ.ಎಂ.ಗಂಗಾಧರಗೌರವಾಧ್ಯಕ್ಷ, ಶ್ರಮಜೀವ ಹಮಾಲರ ಸಂಘ, ಸಿಂಧನೂರು