

ಸಿಂಧನೂರು: ಸರ್ಕಾರ ಕೂಡಲೇ 371- ಜೆ ಕಲಂ ಸಮರ್ಪಕ ಅನುಷ್ಠಾನ ಹಾಗೂ ಗೊಂದಲಗಳ ನಿವಾರಣೆ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಒತ್ತಾಯಿಸಿದರು.
ನಗರದ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 371(ಜೆ) ಅನುಷ್ಠಾನ ಸಮಿತಿ ರಚಿಸಿ, ಸೂಕ್ತ ಅಧಿಕಾರ ನೀಡಬೇಕು. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ 371(ಜೆ) ಕಲಂಗೆ ಸಂಬಂಧಪಟ್ಟ ವ್ಯಾಜ್ಯಗಳು ಕಲಬುರಗಿ, ಧಾರವಾಡ, ಬೆಳಗಾವಿ, ಬೆಂಗಳೂರು ನ್ಯಾಯಾಲಯಗಳಲ್ಲಿ ದಾಖಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಆಡಳಿತ ನ್ಯಾಯ ಮಂಡಳಿ ರಚಿಸಿ, ಕಲಬುರಗಿಯಲ್ಲಿ ಕಾರ್ಯನಿರ್ವಹಿಸುವಂತೆ ಸರ್ಕಾರ ಅದೇಶಿಸಬೇಕು. ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಮೆರಿಟ್ ಆಧಾರದ ಮೇಲೆ ಸ್ಥಾನಗಳು ಮೊದಲು ಸಿಗಬೇಕು. ನಂತರ ಮಿಕ್ಕುಳಿದ ವೃಂದದಲ್ಲಿ ಮೀಸಲಾತಿ ಅನ್ವಯವಾಗಬೇಕು. ರಾಜ್ಯಮಟ್ಟದಲ್ಲಿ ಕೆಲವು ಉನ್ನತ ಅಧಿಕಾರಿಗಳು ನೇಮಕಾತಿ ಸಂದರ್ಭದಲ್ಲಿ ಅರ್ಜಿಯಲ್ಲಿಯೇ ಕ-ಕ ಭಾಗ ಅಥವಾ ಕ-ಕ ಯೇತರ ಪ್ರದೇಶ ಎಂದು ಪ್ರತ್ಯೇಕವಾಗಿ ಮಾಡುತ್ತಿರುವುದರಿಂದ ನಮ್ಮ ಭಾಗದ ವಿದ್ಯಾರ್ಥಿಗಳು ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಕ-ಕ ಯೇತರ ಭಾಗದಲ್ಲಿ ಈಗಿರುವ ಶೇ.8ರ ಮೀಸಲಾತಿ ಬದಲಾಗಿ ಶೇ.20 ರಷ್ಟು ಮೀಸಲಾತಿ ನೀಡಬೇಕು. ವಿಶ್ವವಿದ್ಯಾಲಯಗಲ್ಲಿ ಪಿಎಚ್‌ಡಿ ಪ್ರವೇಶಕ್ಕೆ ಮೀಸಲಾತಿ ನೀಡಬಾರದು ಎಂಬ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ರಸ್ತೆ, ರೈಲ್ವೆ ಸಾರಿಗೆ ಸೇರಿ ಮೂಲ ಸೌಕರ್ಯಗಳಿಗೆ ಸಂಬಂಧಪಟ್ಟಂತೆ ಸಮಗ್ರ ಯೋಜನೆ ರೂಪಿಸಿ ರಾಜ್ಯ ಸರ್ಕಾರದ ಹಣಕಾಸಿನ ನೆರವಿನೊಂದಿಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಅವಶ್ಯ ಹಣಕಾಸಿನ ನೆರವು ಪಡೆದುಕೊಂಡು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಕ್ಷರ ಆವಿಷ್ಕಾರ ಯೋಜನೆಯಡಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸೇರ್ಪಡೆ ಮಾಡಬೇಕು. ಪ್ರಾಥಮಿಕ ಹಂತದಿಂದ ಕಾಲೇಜು ಮಟ್ಟದವರೆಗೆ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರದಿಂದ ಬೋರ್ಡ್‌ನ ಅಡಿಯಲ್ಲಿ ಪ್ರತ್ಯೇಕ ಕಾನೂನು ವಿಭಾಗ ಸ್ಥಾಪನೆಯಾಗಬೇಕು ಹಾಗೂ ಅಧಿಕಾರಿಗಳು ಈ ಭಾಗದವರೇ ಆಗಿರಬೇಕು. ವಿಧಾನಸೌಧ ಕಚೇರಿಯಲ್ಲಿರುವ 371-ಕಾರ್ಯಾಲಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ಥಾಪಿಸಬೇಕು. ಈ ಭಾಗದ ನೇಮಕಾತಿ ಅನುಷ್ಠಾನ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದರು.