ಯುವ ಸಮುದಾಯ ರಕ್ತದಾನ ಮಾಡಲು ಹಿಂಜರಿಕೆ ಬೇಡ

031122 Sindhanuru Blood donation camp
ಸಿಂಧನೂರಿನ ಶ್ರೀಶಕ್ತಿ ರಕ್ತ ಭಂಡಾರ ಕೇಂದ್ರದಲ್ಲಿ ಕರವೇ ತಾಲೂಕು ಘಟಕದಿಂದ ರಕ್ತದಾನ ಶಿಬಿರ ನಡೆಯಿತು.
Published on

ಸಿಂಧನೂರು: ಯುವ ಸಮುದಾಯ ರಕ್ತದಾನ ಮಾಡುವ ಮೂಲಕ ಅಪಘಾತ ಸೇರಿ ಇನ್ನಿತರ ತುರ್ತು ಪರಿಸ್ಥಿತಿಯಲ್ಲಿರುವವರ ಪ್ರಾಣ ರಕ್ಷಣೆಗೆ ಸದಾ ಮುಂದಾಗಬೇಕು ಎಂದು ಜೆಡಿಎಸ್ ಯುವ ಘಟಕದ ಪ್ರಮುಖ ಅಭಿಷೇಕ ನಾಡಗೌಡ ಹೇಳಿದರು.

ನಗರದ ಶ್ರೀಶಕ್ತಿ ರಕ್ತ ಭಂಡಾರ ಕೇಂದ್ರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ತಾಲೂಕು ಘಟಕ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಭುವನೇಶ್ವರಿ ದೇವಿ ಮತ್ತು ಪುನೀತ್ ರಾಜಕುಮಾರ್ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನ್ನದಾನ, ವಿದ್ಯಾದಾನದಂತೆಯೇ ರಕ್ತದಾನವೂ ಶ್ರೇಷ್ಠ. ಒಬ್ಬ ಆರೋಗ್ಯವಂತ ಮನುಷ್ಯ ರಕ್ತದಾನ ಮಾಡುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು. ರಕ್ತದಾನದ ಬಗ್ಗೆ ಯಾವುದೇ ಹಿಂಜರಿಕೆ ಬೇಡ. ಇದನ್ನು ನೀಡುವುದರಿಂದ ಆರೋಗ್ಯಕ್ಕೆ ಅನುಕೂಲವೇ ಹೊರತು ಅನನುಕೂಲವಿಲ್ಲ ಎಂದರು.

ಶ್ರೀಶಕ್ತಿ ರಕ್ತ ಭಂಡಾರ ಕೇಂದ್ರದ ವ್ಯವಸ್ಥಾಪಕ ಸೋಮನಗೌಡ ಬಾದರ್ಲಿ ಮಾತನಾಡಿ, ಸಂಘಟನೆಗಳು ಹೋರಾಟಗಳ ಜತೆಗೆ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಸಾಮೂಹಿಕ ವಿವಾಹ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯಧನ ನೀಡುವಂತಹ ಕಾರ್ಯಕ್ರಮ ಹಮ್ಮಿಕೊಂಡಾಗ ಜನಮುಖಿಯಾಗಿ ಉಳಿಯಲು ಸಾಧ್ಯ ಎಂದರು.

ಕರವೇ ತಾಲೂಕು ಘಟಕದ ಅಧ್ಯಕ್ಷ ವೀರೇಶ ಭಾವಿಮನಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಯೂನೂಸ್‌ಪಾಷಾ ಇದ್ದರು. ಶಿಕ್ಷಕ ಉಮಾಪತಿ ನಿರೂಪಿಸಿದರು. 17 ಯುವಕರು ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net