7ರಂದು ಶ್ರೀಶೈಲ ಜಗದ್ಗುರು ನೇತೃತ್ವದಲ್ಲಿ ಸಭೆ

05042022 Sindhanoor Somanath Shivacharya swamiji
Published on


ಸಿಂಧನೂರು: ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣಮಹೋತ್ಸವ ನಿಮಿತ್ತ ಏರ್ಪಡಿಸಲಾಗುವ ಧಾರ್ಮಿಕ, ಸಾಮಾಜಿಕ ಹಾಗೂ ಜನ ಜಾಗೃತಿ ಪಾದಯಾತ್ರೆ ಕುರಿತು ಚರ್ಚಿಸಲು ಏ.7ರಂದು ಸ್ಥಳೀಯ ಕೋಟೆ ಕಲ್ಯಾಣ ಮಂಟಪದಲ್ಲಿ ಸಂಜೆ 5ಕ್ಕೆ ಸಭೆ ಏರ್ಪಡಿಸಲಾಗಿದೆ. ಜಗದ್ಗುರುಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಕೋಟೆ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2022ರ ಅ.29ರಂದು ಶ್ರೀಶೈಲ ಜಗದ್ಗುರುಗಳ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಯಡಿಯೂರಿನಿಂದ ಶ್ರೀಶೈಲದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. 2023ರ ಜ.14ರವರೆಗೆ ಧಾರ್ಮಿಕ, ಸಾಮಾಜಿಕ ಹಾಗೂ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪಾದಯಾತ್ರೆ ಮಾರ್ಗದಲ್ಲಿನ ಊರುಗಳಲ್ಲಿ ಧರ್ಮ ಜಾಗೃತಿ, ಲಿಂಗ ದೀಕ್ಷೆ, ದುಶ್ಚಟಗಳ ಭಿಕ್ಷೆ ಹಾಗೂ ರಸ್ತೆ ಎರಡು ಬದಿಗೆ ವೃಕ್ಷಗಳನ್ನು ನೆಡಲಾಗುವುದು. ಈ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ನಿವೃತ್ತ ಪ್ರಾಚಾರ್ಯ ಶಾಶ್ವತಸ್ವಾಮಿ ಮುಕ್ಕುಂದಿಮಠ, ವೀರಶೈವ ಸಮುದಾಯದ ತಾಲೂಕು ಘಟಕ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net