

ಸಿಂಧನೂರು: ವಿಶೇಷ ಪರಿಹಾರ ಪ್ಯಾಕೇಜ್ ನೀಡಲು ಖಾಸಗಿ ಕಾಲೇಜ್ ಉಪನ್ಯಾಸಕರ ಒಕ್ಕೂಟ ಹಾಗೂ ಸರ್ಕಾರಿ ಪದವಿ ಕಾಲೇಜ್‌ಗಳ ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿವೆ.
ತಹಸಿಲ್ ಕಚೇರಿ ಶಿರಸ್ತೇದಾರ ಅಂಬಾದಾಸ್‌ಗೆ ಗುರುವಾರ ಮನವಿ ಸಲ್ಲಿಸಿದವು. ಕರೊನಾ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಈಗಾಗಲೇ ಸರ್ಕಾರ 5 ಸಾವಿರ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದೆ. ಅದೇ ರೀತಿ ಖಾಸಗಿ ಕಾಲೇಜ್‌ಗಳ ಉಪನ್ಯಾಸಕರು ಸಹ ಲಾಕ್‌ಡೌನ್‌ದಿಂದಾಗಿ ಕಷ್ಟ ಎದುರಿಸುತ್ತಿದ್ದಾರೆ. ದೈನಂದಿನ ಖರ್ಚು-ವೆಚ್ಚ ಭರಿಸಲಾಗದೆ ಮನನೊಂದು ಕೆಲ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಸಂಕಷ್ಟದಲ್ಲಿರುವ ಉಪನ್ಯಾಸಕರನ್ನು ಕೋವಿಡ್ ಸಂಕಷ್ಟದ ಪರಿಹಾರದ ಪಟ್ಟಿಗೆ ಸೇರಿಸಿ ವಿಶೇಷ ಪ್ಯಾಕೇಜ್ ನೀಡಬೇಕು. ಕೋವಿಡ್‌ನಿಂದ ಮೃತಪಟ್ಟ ಖಾಸಗಿ ಕಾಲೇಜ್ ಉಪನ್ಯಾಸಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಒಕ್ಕೂಟದ ಸದಸ್ಯರಾದ ಸುರೇಶ ಮುಳ್ಳೂರು, ಶಿವಪುತ್ರಪ್ಪ, ಮಲ್ಲಯ್ಯ ಹಿರೇಮಠ, ವೀರೇಶ ದೇವರಗುಡಿ, ನೂರ್‌ಮಹ್ಮದ್, ಡಾ.ಮದುಗಪ್ಪ, ಬಸವರಾಜ ಚಿಗರಿ ಇತರರು ಇದ್ದರು.