

ಮಹ್ಮದ್ ಉಸ್ಮಾನ್ ಅಲಿ ಅವರ ಕಲಾಕೃತಿಗಳ ಎಕ್ಸಿಬಿಷನ್
ಸಿಂಧನೂರು: ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು ಕಲಾವಿದನ ಸೃಜನಶೀಲ ಸಾಮಾಮರ್ಥ್ಯವನ್ನು ಅನಾವರಣಗೊಳಿಸುವ ಕಾರಣ ಕಲೆ, ಸಾಹಿತ್ಯ, ಸಂಸ್ಕೃತಿಯ ಈ ತಾಲೂಕಿನಲ್ಲಿ ಇಂಥ ಪ್ರದರ್ಶನಗಳು ನಿರಂತರ ನಡೆಯಲಿ ಎಂದು ಮ್ಯಾದರ್ ಲಲಿತಕಲಾ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಚ್.ಮ್ಯಾದರ್ ಹೇಳಿದರು.
ನಗರದ ಆದರ್ಶ ಕಾಲನಿಯ ವಿರಿಂಚಿ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದೊಂದಿಗೆ ಏರ್ಪಡಿಸಿದ್ದ ಮಹ್ಮದ್ ಉಸ್ಮಾನ್ ಅಲಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲಾವಿದನ ಭಾವನೆಗಳು ಸಹೃದಯರನ್ನು ತಲುಪಬೇಕಾದರೆ ಇಂಥ ಕಲಾ ಪ್ರದರ್ಶನ ಆಯೋಜನೆ ಅಗತ್ಯ. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಬಹುತೇಕ ಪಾಲಕರು ತಮ್ಮ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕೆನ್ನುತ್ತಾರೆ. ಆದರೆ, ಒಬ್ಬ ಒಳ್ಳೆಯ ಕಲಾವಿದರಾಗಬೇಕೆಂದು ಬಯಸುವುದಿಲ್ಲ. ಬೆರೆಳೆಣಿಕೆಯಷ್ಟು ಜನರು ಈ ರೀತಿ ಬಯಸುತ್ತಾರೆ. ಅಂಥವರ ಪಟ್ಟಿಯಲ್ಲಿ ಉಸ್ಮಾನ್ ಅಲಿ ನಿಲ್ಲುತ್ತಾರೆ. ಅವರು ತಮ್ಮ ಚಿತ್ರಗಳನ್ನು ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರುವಂತೆ ಮಾಡಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಇಂಥ ಕಲಾವಿದರ ಸಂಖ್ಯೆ ಹೆಚ್ಚಬೇಕು ಎಂದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ ಮಾತನಾಡಿ, ಈ ಭಾಗದ ಕಲೆ, ಪರಂಪರೆ ಉಳಿಸಿ-ಬೆಳೆಸುವಲ್ಲಿ ಕಲಾವಿದರು ನೀಡಿದ ಕೊಡುಗೆ ಅನನ್ಯವಾಗಿದೆ. ಚಿತ್ರಕಲೆ ನಮ್ಮ ಇತಿಹಾಸ ಬಿಂಬಿಸುತ್ತದೆ. ಕಲಾವಿದರು ಅಂತಾರಾಷ್ಟ್ರೀಯ ಮಟ್ಟದದಲ್ಲಿ ಖ್ಯಾತಿ ಪಡೆದಿದ್ದಾರೆ. ವಿರಿಂಚಿ ಆರ್ಟ್ ಗ್ಯಾಲರಿಗೆ ತಮ್ಮ ಕೆಳಮನೆಯನ್ನೇ ನೀಡಿರುವ ಶಿವಾನಂದ ಸಾತಿಹಾಳರ ಕಲಾ ಪ್ರೀತಿ ಎಲ್ಲರಿಗೂ ಮಾದರಿ ಎಂದರು. ನಿವೃತ್ತ ಚಿತ್ರಕಲಾ ಶಿಕ್ಷಕ ಟಿ.ಬಿ.ಬಡಿಗೇರ ಮಾತನಾಡಿ, ಕಲಾ ಜಗತ್ತಿನ ವಿಸ್ತಾರ ದೊಡ್ಡದಿದೆ. ಎಷ್ಟು ಆಳಕ್ಕಿಳಿದರೂ ಕೊನೆ ಎನ್ನುವುದು ಇಲ್ಲ. ತಾಲೂಕಿನ ಮೂವರು ಕಲಾವಿದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ಸಂಗತಿ ಎಂದರು. ನೂತನ ಕಲಾ ಮಹಾವಿದ್ಯಾಲಯ ಪ್ರಾಚಾರ್ಯ ರಮೇಶ ಸಜ್ಜನ್ ಮಾತನಾಡಿ, ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಲಾ ಜಗತ್ತು ಬೆಳೆಗಿಸುತ್ತಿರುವುದು ತೃಪ್ತಿ ತಂದಿದೆ. ಸಾಲ ಮಾಡಿ ಸಂಸ್ಥೆ ಉಳಿಸಿರುವೆ, ಚಿತ್ರಕಲೆಯನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು.
ವಿರಿಂಚಿ ಆರ್ಟ್ ಗ್ಯಾಲರಿ ಮುಖ್ಯಸ್ಥ ಶಿವಾನಂದ ಸಾತಿಹಾಳ ಅಧ್ಯಕ್ಷತೆ ವಹಿಸಿದ್ದರು. ಮನೋಹರ ಪತ್ತಾರ ನಿರೂಪಿಸಿದರು. ಕಲಾವಿದ ಮಹ್ಮದ್ ಉಸ್ಮಾನ್ ಅಲಿ, ಪ್ರಮುಖರಾದ ಅಬ್ದುಲ್‌ಸಾಬ್ ಇತರರು ಇದ್ದರು.