

ಸಿಂಧನೂರು: ನಗರದ ಹೃದಯಭಾಗದಲ್ಲಿನ ಆದಿಶೇಷ ದೇವಸ್ಥಾನದ ಹುಂಡಿಯನ್ನು ಕಳ್ಳರು ಶನಿವಾರ ಮಧ್ಯರಾತ್ರಿ ಕದ್ದೊಯ್ದಿದ್ದಾರೆ.
ದೇವಸ್ಥಾನದ ಗರ್ಭಗುಡಿ ಮುಂಭಾಗದಲ್ಲಿರಿಸಿದ್ದ ಈ ಹುಂಡಿಯಲ್ಲಿ ಭಕ್ತರು ಕಾಣಿಕೆ ಹಾಕುತ್ತಿದ್ದರು. ದೇವಸ್ಥಾನ ಪಕ್ಕದಲ್ಲಿರುವ ಗೇಟ್ ಕೀ ಒಡೆದ ಕಳ್ಳರು ಹುಂಡಿಯನ್ನು ಹೂವು ಮಾರಾಟ ಮಾಡುತ್ತಿದ್ದ ಬಂಡಿಯಲ್ಲಿಟ್ಟುಕೊಂಡು ತಳ್ಳಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಎಂದಿನಂತೆ ಬೆಳಗ್ಗೆ ಅರ್ಚಕರು ಬಂದಾಗ ವಿಷಯ ಬಯಲಾಗಿದೆ. ಅರ್ಚಕರು ದೇವಸ್ಥಾನ ಸಮಿತಿ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದು, ನಂತರ ಪೊಲೀಸರು ಸ್ಥಳಕ್ಕೆ ಬಂದು ಮಹಜರ್ ಮಾಡಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎರಡು ವರ್ಷದಿಂದ ಕರೊನಾ ಇದ್ದ ಕಾರಣ ಜಾತ್ರೆ ನಡೆಸಿರಲಿಲ್ಲ. ಹೀಗಾಗಿ ಹುಂಡಿ ತೆರೆದು ಹಣ ಎಣಿಕೆ ಮಾಡಿರಲಿಲ್ಲ. ಬರುವ ಶ್ರಾವಣಮಾಸದ ಕಡೆ ಸೋಮವಾರ ಜಾತ್ರೆ ನಡೆಸುವ ಸಂದರ್ಭ ಹುಂಡಿ ತೆಗೆಯಲು ಭಕ್ತ ಸಮೂಹ ತೀರ್ಮಾನಿಸಿತ್ತು. ಅಷ್ಟರೊಳಗೆ ಕಳ್ಳತನ ನಡೆದಿದೆ.
ಒತ್ತಾಯ: ತಾಲೂಕಿನ ವಿವಿಧೆಡೆಯ ದೇವಸ್ಥಾನಗಳ ಹುಂಡಿ ಕಳ್ಳತನ ಪ್ರಕರಣ ನಡೆಯುತ್ತಲೇ ಇವೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಕಳ್ಳರನ್ನು ಪತ್ತೆ ಹಚ್ಚಿ, ಶಿಕ್ಷೆಗೆ ಗುರಿಪಡಿಸಬೇಕು ಎಂದು ಶ್ರೀ ಆದಿಶೇಷ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಎಸ್.ಶರಣೇಗೌಡ, ಅಧ್ಯಕ್ಷ ಚನ್ನನಗೌಡ ಪೊಪಾ, ಜಂಟಿ ಕಾರ್ಯದರ್ಶಿ ವಿಶ್ವನಾಥ ಮಾಲಿಪಾಟೀಲ್, ಸದಸ್ಯರಾದ ಶಿವಕುಮಾರ ಜವಳಿ, ಪ್ರಭುರಾಜ, ಶರಣಬಸಯ್ಯ ರಾವಿಹಾಳ ಒತ್ತಾಯಿಸಿದ್ದಾರೆ.