ಸಿ.ಎಸ್.ಎಫ್.ಆವರಣದಲ್ಲಿ ಶಾಸನ ಪತ್ತೆ

Untitled design (6)
ಸಿಂಧನೂರು ತಾಲೂಕಿನ ಸಿ.ಎಸ್.ಎಫ್. ಆವರಣದಲ್ಲಿ ಶಾಸಕ ಪತ್ತೆಯಾಗಿರುವುದು. ಸಂಶೋಧಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿ, ಸಿ.ಎಸ್.ಎಫ್ ನ ನಿರ್ದೇಶಕ ವಿನಯಕುಮಾರ, ಮ್ಯಾನೇಜರ್ ಅರುಣಕುಮಾರ, ಇಂಜನೀಯರ್‌ರಾದ ಚೇತನ್‌ಕುಮಾರ ಹಾಗೂ ನೌಕರರಾದ ಅಯ್ಯಪ್ಪ, ವೆಂಕೋಬ, ಶಿವಪ್ಪ, ವಿದ್ಯಾರ್ಥಿಗಳಾದ ಹುಸೇನಪೀರ್ ಮಲ್ಲಿಗಿಮಡುವು, ಸುರೇಶ ತುರಕಟ್ಟಿಕ್ಯಾಂಪ್ ಇದ್ದರು.
Published on

ಸಿಂಧನೂರು: ತಾಲೂಕಿನ ಸಿ.ಎಸ್.ಎಫ್. ಆವರಣದಲ್ಲಿ ಶಾಸನವನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿ ಪತ್ತೆಹಚ್ಚಿದ್ದಾರೆ.

ಈ ಶಾಸನವು ಬೆಣಚುಕಲ್ಲಿನ ಶಿಲೆಯದಾಗಿದ್ದು, ಕ್ರಿ.ಶ. 13ನೇ ಶತಮಾನದ್ದಾಗಿದೆ. ಇದು ಕನ್ನಡ ಭಾಷೆ ಕನ್ನಡ ಲಿಪಿಯಲ್ಲಿದ್ದು, ಒಂಬತ್ತು ಸಾಲುಗಳಿಂದ ರಚಿತವಾಗಿದೆ. ಇದರಲ್ಲಿ ಹಿರಿಯ ಗೊಬ್ಬೂರ (ಪ್ರಸ್ತುತ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮ) ಜನ್ನಯ್ಯಭಟ್ಟ, ರಾರಾವಿಯ (ಬಳ್ಳಾರಿ ಜಿಲ್ಲೆಯ ಗ್ರಾಮ) ಜನ್ನಯ್ಯಭಟ್ಟರ ವೃತ್ತಿಗೆ ಹಾಗೂ ಕೌಶಿಕ ಗೋತ್ರದ ಸಾಕಮದ ವಂಕಣ ಭಟ್ಟರ ಮಕ್ಕಳಾದ ದಾಮೋದರ ಭಟ್ಟರಿಗೆ ಹಿರಿಯ ಬೆಳ್ಳಹಾರದ (ಪ್ರಸ್ತುತ ಒಳಬಳ್ಳಾರಿ ಗ್ರಾಮ) ಅಶೇಷ ಮಹಾಜನರು ಆದಿತ್ಯದೇವರ ಗಡಿಂಬದಲಿ ಅಳೆದು ಎರಡು ಮತ್ತರು ಭೂಮಿಯನ್ನು ಮದುವೆಯ ಕಾಲದಲ್ಲಿ ಪ್ರೀತಿಯ ದಾನವಾಗಿ ನೀಡಿದ ಬಗ್ಗೆ ದಾಖಲಿಸುತ್ತದೆ ಎಂದು ಸಂಶೋಧಕರು ಮಾಹಿತಿ ನೀಡಿದರು.'

ಶಾಸನದ ಮೇಲ್ಭಾಗದಲ್ಲಿ ಕಳಚೂರಿ ಅರಸರ ಲಾಂಛನ ನಂದಿ, ಕತ್ತಿಯ ಜತೆಗೆ ವಾಮನನ ವಿಗ್ರಹವಿದೆ. ಇದರಿಂದ ತಿಳಿದು ಬರುವದೇನೆಂದರೆ ಇದು ಸ್ಮಾರ್ತ ಬ್ರಾಹ್ಮಣರ ಪರಂಪರೆಗೆ ಸೇರಿದ್ದಾಗಿದೆ. ವಾಮನನು ತನ್ನ ಎಡಗೈಯಲ್ಲಿ ಕೊಡೆಯನ್ನು, ಬಲಗೈಯಲ್ಲಿ ತೀರ್ಥದ ಕುಂಡಲವನ್ನು ಹಿಡಿದಿದ್ದಾನೆ. ಈತನು ತನ್ನ ಹಣೆಗೆ ಗಂಧದ ಲೇಪನ, ಕಚ್ಚೆ ದೋತರ ಧರಿಸಿದ್ದು ಕಾಣಬರುತ್ತದೆ. ಇದರ ಮೇಲ್ಬಾಗದಲ್ಲಿ ಚಂದ್ರ, ಸೂರ್ಯನ ಶಿಲ್ಪಗಳಿವೆ ಎಂದು ಎಂದು ಸಂಶೋಧಕರು ತಿಳಿಸಿದರು.

ಈ ಶಾಸನದ ಪತ್ತೆ ಕಾರ್ಯದಲ್ಲಿ ಸಿ.ಎಸ್.ಎಫ್ ನ ನಿರ್ದೇಶಕ ವಿನಯಕುಮಾರ, ಮ್ಯಾನೇಜರ್ ಅರುಣಕುಮಾರ, ಇಂಜನೀಯರ್‌ರಾದ ಚೇತನ್‌ಕುಮಾರ ಹಾಗೂ ನೌಕರರಾದ ಅಯ್ಯಪ್ಪ, ವೆಂಕೋಬ, ಶಿವಪ್ಪ, ವಿದ್ಯಾರ್ಥಿಗಳಾದ ಹುಸೇನಪೀರ್ ಮಲ್ಲಿಗಿಮಡುವು, ಸುರೇಶ ತುರಕಟ್ಟಿಕ್ಯಾಂಪ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net