

ಸಿಂಧನೂರು: ಮಳೆಯಿಂದ ಹಾನಿಗೊಳಗಾದ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ತಾಲೂಕು ಘಟಕದಿಂದ ಮಿನಿವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಿ ತಹಸಿಲ್ ಕಚೇರಿ ಶಿರಸ್ತೇದಾರ್ ಗುರುರಾಜ್‌ರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಮಳೆಯಿಂದ ಹಾಳಾದ ಭತ್ತ, ಹತ್ತಿ ನೀರಾವರಿ ಆಶ್ರಿತ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ತೊಗರಿ, ಕಡಲೆ, ಸೂರ್ಯಕಾಂತಿ, ಸಜ್ಜೆ, ಜೋಳ, ಮೆಕ್ಕೆಜೋಳದ ಒಣ ಬೇಸಾಯದ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರ ನೀಡಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ವಿಮೆ ಮಂಜೂರು ಮಾಡಬೇಕು. ಕಂದಾಯ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರು ಸರಿಯಾದ ಸ್ಥಾನಿಕ ಪರಿಶೀಲನೆ ಮಾಡಿ ಮಳೆಯಿಂದ ಬಿದ್ದ ಮನೆಗಳನ್ನು ಸಮರ್ಪಕವಾಗಿ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಕೃಷಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಜಂಟಿಯಾಗಿ ಬೆಳೆ ನಷ್ಟ ರೈತರ ಜಮೀನಿಗೆ ಹೋಗಿ ಸಮಗ್ರ ಸಮೀಕ್ಷೆ ಮಾಡಿ ನೇರವಾಗಿ ಬೆಳೆನಷ್ಟಕ್ಕೊಳಗಾದ ರೈತರನ್ನು ಭೇಟಿಯಾಗಿ ಪರಿಹಾರ ಒದಗಿಸಬೇಕು. ಪ್ರತಿ ಗ್ರಾಪಂಗೊಂದು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕೆಆರ್‌ಎಸ್ ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಸದಸ್ಯರಾದ ಚಿಟ್ಟಿಬಾಬು, ಬಿ.ಎನ್.ಯರದಿಹಾಳ, ಆಂಜನೇಯ ಮೋತಿ, ತಿಮ್ಮಮ್ಮ, ರತ್ನಮ್ಮ, ಮಲ್ಲಮ್ಮ, ಅಚ್ಚುತ್ತಮ್ಮ, ಅಮರಮ್ಮ, ಅಂಬಮ್ಮ, ಜಯಶ್ರೀ, ಬೇಗಂ, ರಾಘವೇಂದ್ರ, ದುರುಗಪ್ಪ, ಬಸವರಾಜ, ಲಕ್ಷ್ಮಣ, ಸತ್ಯನಾರಾಯಣ ಇದ್ದರು.