

ಸಿಂಧನೂರು: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭತ್ತ ಕಟಾವು ಯಂತ್ರಗಳ ದರ ನಿಗದಿ ಮಾಡಬೇಕೆಂದು ತಹಸೀಲ್ದಾರ್ ಮಂಜುನಾಥ ಭೋಗಾವತಿ ತಿಳಿಸಿದರು.
ನಗರದ ತಹಸಿಲ್ ಕಚೇರಿಯಲ್ಲಿ ಭಾನುವಾರ ಸಂಜೆ ನಡೆದ ಕಟಾವು ಯಂತ್ರಗಳ ಮಾಲೀಕರ ಸಭೆಯಲ್ಲಿ ಮಾತನಾಡಿದರು. ಕರೊನಾ ವೈರಸ್ ಹಿನ್ನೆಲೆಯಲ್ಲಿ ಈಗಾಗಲೇ ಕಟಾವು ಯಂತ್ರಗಳಿಗೆ ತೊಂದರೆ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ನೀವು ಕೂಡ ರೈತರಿಗೆ ಅನುಕೂಲದ ದರ ನಿಗದಿ ಮಾಡಿಕೊಂಡರೆ ಒಳ್ಳೆಯದು. ಹೆಚ್ಚಿನ ದರ ನಿಗದಿ ಮಾಡುವುದರಿಂದ ರೈತರಿಗೆ ನಷ್ಟವಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಯಂತ್ರಗಳ ಮಾಲೀಕರು, ಕಡಿಮೆ ದರದಲ್ಲಿ ಕಟಾವಿಗೆ ಮುಂದಾದರೆ ನಮಗೂ ಕಷ್ಟವಾಗಲಿದೆ. ರೈತರ ಹೊಲಗಳಿಗೆ ತೆರಳಲು, ಕೊಯ್ಲಿಗೆ ಹೆಚ್ಚಿನ ವೆಚ್ಚವಾಗುತ್ತಿದ್ದು ಪ್ರತಿ ಬಾರಿಯಂತೆ ಈ ಬಾರಿಯೂ ದರ ಇದೆ. ಹೊಸ ದರ ನಿಗದಿ ಮಾಡಿಕೊಂಡಿಲ್ಲ. ರೈತರು ಭತ್ತ ಮಾರಿದ ನಂತರ ನಮಗೆ ಹಣ ನೀಡುತ್ತಾರೆ. ನಾವು ರೈತರಿಗೆ ಅನುಕೂಲವಾಗುವಂತೆ ದರ ನಿಗದಿ ಮಾಡಿಕೊಂಡಿದ್ದೇವೆ ಎಂದರು.
ಕೃಷಿ ಅಧಿಕಾರಿ ಡಾ.ಜಯಪ್ರಕಾಶ ಮಾತನಾಡಿ, ಭತ್ತ ಕೊಯ್ಲಿಗೆ ಹೆಚ್ಚಿನ ದರ ನಿಗದಿ ಮಾಡಬೇಡಿ, ದೂರುಗಳು ಬಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ನೀವು ಹಾಗೂ ರೈತರು ಸೇರಿ ಅನುಕೂಲಕರ ದರ ನಿಗದಿ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.