

ಸಿಂಧನೂರು: ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಂಗಮಂದಿರ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಸೇವೆಗೆ ಶೀಘ್ರವೇ ಅಣಿಗೊಳಿಸಲಾಗುವುದೆಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.
ನಗರದ ರಾಜೇಂದ್ರಕುಮಾರ್ ಶಾಲೆಯಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಸಮಿತಿ ವತಿಯಿಂದ 9 ಹಾಗೂ 10 ನೇಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸಾಹಿತ್ಯ ಕುರಿತಾಗಿ ಒಳ್ಳೆಯ ವಿಷಯಗಳನ್ನು ಸಂಗ್ರಹಿಸುವುದು, ಅದನ್ನು ಪುಸ್ತಕವಾಗಿ ಹೊರ ತರುವುದು ಒಳ್ಳೆಯ ಬೆಳವಣಿಗೆ. ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಪುಸ್ತಕ ತಯಾರಿಸಿದ್ದು ಒಂದು ಶ್ಲಾಘನೀಯ ಕೆಲಸ. ಯುವಕರಿಗೆ ಈ ಪುಸ್ತಕ ಮಾದರಿಯಾಗಬೇಕಿದೆ. ಸಿಂಧನೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯ ಸಮ್ಮೇಳನವಾಗಿ ಮಾರ್ಪಾಡಾಗಿರುವುದು ಹೆಮ್ಮೆಯ ಸಂಗತಿಯಾಗಿ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಬಸವಪ್ರಭು ಬೆಟ್ಟದೂರು ಮಾತನಾಡಿ, ಪ್ರತಿಯೊಬ್ಬ ಸಾಹಿತ್ಯಾಸಕ್ತರು ಕನ್ನಡ ಶಾಲೆಗಳ ಉಳಿವಿಗಾಗಿ ಶ್ರಮಿಸೋಣ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಾಣಲು ಸಾಧ್ಯವಾಗಿದೆ. ಕಳೆದ 10 ತಿಂಗಳ ಕಾಲ ಕರೊನಾ ಇದ್ದ ಕಾರಣಕ್ಕೆ ಯಾವ ಕಾರ್ಯಕ್ರಮ ಆಗಲಿಲ್ಲ. ಈಗ ಫೆ.21 ರ ಒಳಗೆ ದೇವದುರ್ಗ, ಮಾನ್ವಿ ಹಾಗೂ ಲಿಂಗಸುಗೂರು ತಾಲೂಕು ಸಮ್ಮೇಳನಗಳು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ತಾಲೂಕು ಕಸಾಪ ಅಧ್ಯಕ್ಷೆ ಸರಸ್ವತಿ ಪಾಟೀಲ್ ಮಾತನಾಡಿದರು. ಜಿಲ್ಲಾ ಘಟಕದ ಭೀಮನಗೌಡ ಇಟಗಿ, ವೀರಭದ್ರಪ್ಪ ಕುರುಕುಂದಿ, ಶಿವಕುಮಾರ್ ಜವಳಿ, ಕೆ.ಶರಣಪ್ಪ ತೆಂಗಿನಕಾಯಿ, ಶಂಕರ್ ಗುರಿಕಾರ್, ವೀರೇಶ ಯರದಿಹಾಳ ಇತರರು ಇದ್ದರು.