

ಸಿಂಧನೂರು: ಕರೊನಾ ಹರಡಂತೆ ಜನರು ಜಾಗೃತರಾದರೆ ಮಾತ್ರ ಸೋಂಕು ನಿಯಂತ್ರಣ ಸಾಧ್ಯ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಅಲಬನೂರು ಗ್ರಾಮದಲ್ಲಿ ಬಸನಗೌಡ ಬಾದರ್ಲಿ ಫೌಂಡೇಷನ್ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಸ್ಕ್ ಹಾಕಿ ಸಿಂಧನೂರು, ಸ್ಯಾನಿಟೈಸರ್ ಸಿಂಪಡಣೆ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೊನಾ 1ನೇ ಅಲೆಯಿಂದ ಸಂಕಷ್ಟ ಎದುರಿಸಿದ್ದಾಗಿದೆ. ಈಗ ನಾವು ಅರಿತುಕೊಂಡು ನಡೆದರೆ ರೋಗದಿಂದ ಮುಕ್ತರಾಗಬಹುದು. ಮನೆಯಲ್ಲಿಯೇ ಇದ್ದು, ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರ ನಿಮ್ಮನ್ನು ಕಾಪಾಡಿಕೊಳ್ಳಲು ಬೇಡಿಕೊಳ್ಳುವ ಪರಿಸ್ಥಿತಿ ಬರಬಾರದು ಎಂದರು.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿ, ಕರೊನಾ ಸಂಕಷ್ಟದಲ್ಲಿ ನೆರವಾಗುವುದು ಪ್ರತಿಯೊಬ್ಬರ ಜವಬ್ದಾರಿ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ನಮ್ಮ ಜಾಗೃತಿ ವಾಹನ ಜನರಿಗೆ ಮಾಹಿತಿ ಒದಗಿಸಲಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷ ರಾಮಲಿಂಗರಡ್ಡಿ, ಗ್ರಾಪಂ ಸದಸ್ಯರಾದ ಚನ್ನಬಸವ, ಕೆ.ಬಸವರಾಜ, ಎಸ್.ವಿರೂಪಾಕ್ಷಗೌಡ, ಜಿ.ವೆಂಕಟೇಶ, ಮೆಹಬೂಬ್‌ಸಾಬ್, ಪ್ರಮುಖರಾದ ಚನ್ನಬಸವ ಕುಂಬಾರ, ಪಂಪಾಪತಿ ರಂಗಾಪುರ ಇದ್ದರು.