ಪರಿಸರ ಕಾಳಜಿ ಮರೆತರೆ ಆಪತ್ತು; ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ

23052021 Sindhanoor Environmental Awareness Program
Published on

ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ಸಿಂಧನೂರು: ಪರಿಸರ ಕಾಳಜಿ ಮರೆತರೆ ಆಪತ್ತು ಖಚಿತ. ಇದಕ್ಕೆ ಆಕ್ಸಿಜನ್ ಕೊರತೆಯಾಗುತ್ತಿರುವುದೇ ಸಾಕ್ಷಿ ಎಂದು ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯಸ್ವಾಮೀಜಿ ಹೇಳಿದರು.

ನಗರದ ಗಾಂಧಿ ವೃತ್ತದಲ್ಲಿ ಭಾನುವಾರ ವನಸಿರಿ ಫೌಂಡೇಶನ್, ಪ್ರಾದೇಶಿಕ ಅರಣ್ಯ ವಲಯ, ಸಾಮಾಜಿಕ ಅರಣ್ಯ ವಲಯ ಹಾಗೂ ದೃಶ್ಯದೀಪ ಕಲಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡ ಪರಿಸರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸಸಿ ವಿತರಣೆ ಮಾಡಿ ಮಾತನಾಡಿದರು. ಪ್ರಕೃತಿ ವಿರುದ್ಧವಾಗಿ ಜೀವನ ಸಾಗಿಸಿದರೆ ಏನಾಗುತ್ತದೆ ಎನ್ನುವುದು ಈಗ ಬಹುತೇಕ ಅರ್ಥವಾಗಿದೆ. ಕರೊನಾ ಮಹಾಮಾರಿ ಜನರಿಗೆ ಜೀವನದ ಪಾಠ ಕಲಿಸಿದೆ. ಪರಿಸರ ಪ್ರಜ್ಞೆ ಮೂಡಿಸಿಕೊಂಡು ಸಸಿ ನೆಡುವ ಮಹತ್ತರ ಕೆಲಸವಾಗಬೇಕು ಎಂದರು.

ವನಸಿರಿ ಫೌಂಡೇಶನ್ ಜಿಲ್ಲಾಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ, ಫೌಂಡೇಶನ್‌ದಿಂದ ಕರೊನಾ ಜಾಗೃತಿ ಜತೆಗೆ ಪರಿಸರ ಜಾಗೃತಿ ನಡೆಸಲಾಗುತ್ತಿದೆ. ಗಿಡದಿಂದ ಉಚಿತವಾಗಿ ಸಿಗಬೇಕಾದ ಆಕ್ಸಿಜನ್ ಇವತ್ತು ಹಣ ನೀಡಿದರೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಾವು ಅರ್ಥ ಮಾಡಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಮುಖಂಡ ರಾಜಶೇಖರ ಪಾಟೀಲ್, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಪೌರಾಯುಕ್ತ ವಿರೂಪಾಕ್ಷಮೂರ್ತಿ, ಸಿದ್ದು ಹೂಗಾರ, ರಾಜು ಬಳಗಾನೂರು, ವೀರಬಾಬು, ಉಮೇಶ ಪತ್ತಾರ, ನಾಗರಾಜ, ಮನೋಹರ ಪತ್ತಾರ, ರಮೇಶ ಮಾನ್ವಿ, ಅಮೃತ ಬದಿ, ಯಶವಂತ, ನಾಗರಾಜ ಖಂಡಿಮಠ, ಚಂದ್ರು ಮಲ್ಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net