ಆರೋಗ್ಯ ಶಿಬಿರ ಬಡವರಿಗೆ ವರದಾನ; ಡಾ.ರವಿಕುಮಾರ ಅಭಿಮತ

07012021 Sindhanoor Free Helth Checkup camp
Published on

ಸಿಂಧನೂರು: ವಿವಿಧ ಆಸ್ಪತ್ರೆಗಳು, ಸಂಘ-ಸಂಸ್ಥಗಳಿಂದ ಏರ್ಪಡಿಸುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಬಡವರು, ಮಧ್ಯಮ ವರ್ಗದವರಿಗೆ ವರದಾನವಾಗಿವೆ ಎಂದು ಡಾ.ರವಿಕುಮಾರ ಹೇಳಿದರು.

ನಗರದ ಕುಷ್ಟಗಿ ರಸ್ತೆಯ ಸಂಜೀವಿನಿ ಆಸ್ಪತ್ರೆಯಲ್ಲಿ ಗುರುವಾರ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಸಂಜೀವಿನಿ ಆಸ್ಪತ್ರೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ರೋಗ, ನರರೋಗ, ಮೂತ್ರಪಿಂಡ ರೋಗ, ಕ್ಯಾನ್ಸರ್ ಹಾಗೂ ಸಾಮಾನ್ಯರೋಗ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ. ಕಾರಣ ಪ್ರತಿಯೊಬ್ಬರೂ ಮೊದಲು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಾವು ಆರೋಗ್ಯವಾಗಿದ್ದರೆ ಮಾತ್ರ ಏನ್ನನಾದರೂ ಸಾಧಿಸಲು ಸಾಧ್ಯವಿದೆ. ಇಂತಹ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇಂಜಿನಿಯರ್ ಸರ್ವೋತ್ತಮರಡ್ಡಿ ಮಾತನಾಡಿ, ಹೆಚ್ಚಿನ ವೆಚ್ಚ ಭರಿಸಿ ತಪಾಸಣೆ ಮಾಡಿಸಿಕೊಳ್ಳಲು ಬಡವರಿಗೆ ಕಷ್ಟ. ಇಂಥ ಶಿಬಿರಗಳಿಂದ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕೆಂದರು.

ಸಪ್ತಗಿರಿ ಆಸ್ಪತ್ರೆ ವೈದ್ಯ ರಾಜೇಶ ಶಿಬಿರದ ಲಾಭಗಳ ಬಗ್ಗೆ ವಿವರಿಸಿದರು. ವೈದ್ಯರಾದ ಆರ್.ಸಂದ್ಯಾ, ಭರತ್, ಹನುಮಂತಪ್ಪ, ಸತ್‌ಜಿತ್, ಅಬ್ಬೇಶ ಇದ್ದರು. ಮುತ್ತು ಪಾಟೀಲ್ ನಿರೂಪಿಸಿದರು.

ತಪಾಸಣೆ : ಸ್ಥಳೀಯ ಸಂಜೀವಿನಿ ಆಸ್ಪತ್ರೆಯಲ್ಲಿ ಬೆ.10ರಿಂದ ಆರೋಗ್ಯ ತಪಾಸಣಾ ಶಿಬಿರ ಆರಂಭಗೊಂಡಿತು. ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ರೋಗಿಗಳು ಮಾಸ್ಕ್ ಧರಿಸಿಕೊಂಡು ಸರದಿಯಲ್ಲಿ ನಿಂತು ಆಯಾ ವಿಭಾಗಗಳಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡರು. ‘ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಬಿಪಿಎಲ್, ಅಂತ್ಯೋದಯ ಕಾರ್ಡ್ ತೆಗೆದುಕೊಂಡು ಬೆಂಗಳೂರಿಗೆ ಬಂದರೆ ಉಚಿತವಾಗಿ ಚಿಕಿತ್ಸೆ ಮಾಡಲಾಗುವುದು’ ಎಂದು ಡಾ.ರಾಜೇಶ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net