

ಸಿಂಧನೂರು: ಭಾರತದ ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಾದ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಆಚಪ್ಪ ದೊಡ್ಡಬಸವರಾಜ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚುನಾವಣಾ ಆಯೋಗದ ಆಶಯದಂತೆ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿ, ಅರ್ಹ ಯುವಜನತೆ ನೋಂದಣಿ ಮಾಡಿಸಿಕೊಂಡು ಮತದಾನದ ಗುರುತಿನ ಚೀಟಿ ಪಡೆದು ಕಡ್ಡಾಯವಾಗಿ ಹಕ್ಕು ಚಲಾಯಿಸಬೇಕು ಎಂದರು. ತಾಪಂ ಇಒ ಚಂದ್ರಶೇಖರ ಮಾತನಾಡಿದರು. 2ನೇ ಅಪರ ಸಿವಿಲ್ ನ್ಯಾಯಾಧೀಶೆ ರೂಪಾ ಸಿ. ವಗ್ಗಾ, ಬಿಇಒ ವಾಜೀದಾ ಮಜೀದ್, ಸಿಡಿಪಿಒ ಲಿಂಗನಗೌಡ, ಬಿಸಿಎಂ ವಸತಿ ನಿಲಯ ಅಧಿಕಾರಿ ಲಿಂಗಪ್ಪ ಅಂಗಡಿ, ಡಾ.ಅಯ್ಯನಗೌಡ, ಜಿಪಂ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ಧನರಾಜ, ಬಿಆರ್‌ಸಿ ಸಮನ್ವಯ ಅಧಿಕಾರಿ ಬಸವಲಿಂಗಪ್ಪ, ಮತದಾರರ ಸಾಕ್ಷರತಾ ಕ್ಲಬ್ ಜಿಲ್ಲಾ ಸಂಪನ್ಮೂಲ ವ್ಯಕ್ತಿ ವೀರೇಶ ಗೋನವಾರ, ನ್ಯಾಯಾಂಗ ಇಲಾಖೆಯ ನಾರಾಯಣಸ್ವಾಮಿ, ಲಿಂಗಪ್ಪ, ಬಸವರಾಜ, ರಾಜಾಬಕ್ಷಿ, ಶಿಕ್ಷಣ ಸಂಯೋಜಕ ಸಾವನ್‌ಸಾಬ್ ಇದ್ದರು. ಪ್ರತಿಜ್ಞಾವಿಧಿ ಬೋಧಿಸಲಾಯಿತು. ಇಎಲ್‌ಸಿ ಕ್ಲಬ್ ಹಮ್ಮಿಕೊಂಡಿದ್ದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.