

ಸಿಂಧನೂರು: ಕಾಂಗ್ರೆಸ್ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ತಾಲೂಕು ಘಟಕದಿಂದ ತಾಲೂಕು ಆಡಳಿತ ಸೌಧದ ಎದುರು ಶನಿವಾರ ಧರಣಿ ಹಮ್ಮಿಕೊಂಡಿತ್ತು.
ಕೊಪ್ಪಳ ಸಂಸದ ಸಂಗಣ್ಣ ಮಾತನಾಡಿ, ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಡಿ ಪ್ರತಿಯೊಬ್ಬರೂ ಜೀವನ ನಡೆಸಬೇಕು. ಆದರೆ ಕಾಂಗ್ರೆಸ್ ಗೂಂಡಾಗಿರಿ ಸಂಸ್ಕೃತಿಯ ಪಕ್ಷವಾಗಿದೆ. ಕಾಂಗ್ರೆಸ್ ನಾಯಕರಿಗೆ ಅಧಿವೇಶನದ ಮಹತ್ವ ಗೊತ್ತಿಲ್ಲ. ರಾಷ್ಟ್ರಧ್ವಜದ ಬಗ್ಗೆ ಗೌರವವಿಲ್ಲ. ಕೋವಿಡ್‌ಗೆ ಲಸಿಕೆ ಕಂಡು ಹಿಡಿದಾಗ ಅದರ ಬಗ್ಗೆ ಅಪಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಎರಡನೇ ಅಲೆಯಲ್ಲಿ ಮೊದಲಿಗೆ ಲಸಿಕೆ ಹಾಕಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ 150 ದೇಶಗಳಿಗೆ ಲಸಿಕೆ ರವಾನಿಸಿದರು. ಇದರಿಂದ ಮೋದಿಯನ್ನು ವಿಶ್ವವೇ ಕೊಂಡಾಡುತ್ತಿದೆ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ನೀರಾವರಿ, ರೈತರ, ಬಡವರ ಹಲವಾರು ಸಮಸ್ಯೆಗಳಿವೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದೆ ಕಾಂಗ್ರೆಸ್‌ನವರು ಅಧಿವೇಶನದ ಸಮಯ ವ್ಯರ್ಥ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ವಿರೋಧ ಪಕ್ಷವಾಗಿರದ ಸ್ಥಿತಿಯಲ್ಲಿದೆ. ಕಾಂಗ್ರೆಸ್‌ಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.