

ಸಿಂಧನೂರು: ನಾನು ಸಿಎಂ ರೇಸ್‌ನಲ್ಲಿಲ್ಲ. ಅದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಈಗೆನಿದ್ದರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುದೊಂದೇ ನನ್ನ ಕರ್ತವ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸ್ಪಷ್ಟಪಡಿಸಿದರು.
ತಾಲೂಕಿನ ರಾಗಲಪರ್ವಿ ಕ್ರಾಸ್‌ನಲ್ಲಿ ಅಯ್ಯಮ್ಮ ಭೀಮನಗೌಡ ಬಾದರ್ಲಿ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್, ಬಸನಗೌಡ ಬಾದರ್ಲಿ ಫೌಂಡೇಶನ್‌ನಿಂದ ನಾಗನಗೌಡ ಬಾದರ್ಲಿ ಹಾಗೂ ಅಯ್ಯಮ್ಮ ಭೀಮನಗೌಡ ಬಾದರ್ಲಿ ಸ್ಮರಣಾರ್ಥ ಬುಧವಾರ ಶ್ರೀಶೈಲ ಪಾದಯಾತ್ರಿಗಳಿಗೆ ಹಮ್ಮಿಕೊಂಡಿದ್ದ 16ನೇ ವರ್ಷದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಸಿಎಂ ಆಗುವ ಕುರಿತು ಬಸನಗೌಡ ಬಾದರ್ಲಿ ಉತ್ಸಾಹದಿಂದ ಹೇಳಿದ್ದಾರಷ್ಟೇ. ನನ್ನ ಅಧಿಕಾರಕ್ಕಿಂತ ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ತೀರ್ಮಾನಿಸುತ್ತಾರೆ ಎಂದರು. ಸತತ 16 ವರ್ಷಗಳಿಂದ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಶ್ರೀಶೈಲ ಪಾದಯಾತ್ರಿಗಳಿಗೆ ನಡೆಸುತ್ತಿರುವ ದಾಸೋಹ ಸೇವೆ ಸ್ವಾಗತಾರ್ಹ. ಸದಾ ಚಟುವಟಿಕೆಯಿಂದ ಕೂಡಿರುವಂಥ ಕೆಲಸಗಳನ್ನು ಬಾದರ್ಲಿ ಮಾಡುತ್ತಾರೆ. ಪಕ್ಷ ಸಂಘಟನೆ ದೃಷ್ಟಿಯಿಂದ ಎಲ್ಲರೂ ದುಡಿಯೋಣ ಎಂದು ತಿಳಿಸಿದರು.
ಮೂರುಮೈಲ್ ಕ್ಯಾಂಪಿನ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸನಗೌಡ ಬಾದರ್ಲಿ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಶ್ರೀಶೈಲಕ್ಕೆ ತೆರಳುವ ಲಕ್ಷ ಸಂಖ್ಯೆಯ ಭಕ್ತರಿಗೆ ದಾಸೋಹ ನೀಡುವುದು ಸಣ್ಣ ಕೆಲಸವಲ್ಲ ಎಂದರು.
ಯುವ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿದರು. ಯದ್ದಲದೊಡ್ಡಿ ಮಹಾಲಿಂಗಸ್ವಾಮೀಜಿ, ವೆಂಕಟಗಿರಿ ಕ್ಯಾಂಪ್ ಸಿದ್ದರಾಮೇಶ್ವರ ಶರಣರು, ತುರ್ವಿಹಾಳ ಅಮೋಘ ಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್, ಕಲ್ಮಠದ ಸಿದ್ದಲಿಂಗ ಸ್ವಾಮೀಜಿ, ಗಫೂರ್ ತಾತ, ಮಾಜಿ ಶಾಸಕ ಶಾಸಕ ಎನ್.ಎಸ್.ಭೋಸರಾಜು, ಮಾಜಿ ಎಂಎಲ್‌ಸಿ ಶರಣಪ್ಪ ಮಟ್ಟೂರು, ಸೂರಜ್ ಹೆಗಡೆ, ಶಿವಕುಮಾರ ಇದ್ದರು.
ನಂತರ ನಗರದ ಸಂಗಮ ಪ್ಯಾಲೇಸ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಬೈಕ್ ರ‌್ಯಾಲಿ ನಡೆಸಿದರು. ತದನಂತರ ಜೆಸಿಬಿ ಮೂಲಕ ಸೇಬಿನ ಹಾರ ಹಾಕಿದರು.