

ಸಿಂಧನೂರು: ರಾಜ್ಯ ಸಂಘಟನೆ ಕರೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಸಮಿತಿ ಆರೋಗ್ಯ ಸೇವೆ ಸ್ಥಗಿತಗೊಳಿಸಿ, ಧರಣಿ ನಡೆಸಿ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿತು.
ಕರೊನಾ ವೈರಸ್ ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಹಿರಿದಾಗಿದೆ. ಬರೀ ಮೆಚ್ಚುಗೆಯ ಮಾತುಗಳಿಂದ ಕಾರ್ಯಕರ್ತೆಯರ ಹೊಟ್ಟೆ ತುಂಬುವುದಿಲ್ಲ. ಕೂಡಲೇ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ಗೌರವಧನ ಖಾತರಿ ಪಡಿಸಬೇಕು. ಕೋವಿಡ್-19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷತಾ ಸಾಮಗ್ರಿ ನೀಡಬೇಕು. ಕೋವಿಡ್-19 ಗೆ ತುತ್ತಾದ ಆಶಾಗೆ ಪರಿಹಾರ, ಸಂಪೂರ್ಣ ಚಿಕಿತ್ಸೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ತಾಲೂಕು ಸಮಿತಿ ಅಧ್ಯಕ್ಷೆ ಭೀಮಮ್ಮ, ಕಾರ್ಯದರ್ಶಿ ಶರಣಮ್ಮ, ವೇದಾವತಿ, ಯಂಕಮ್ಮ, ಮಾಲಾಶ್ರೀ, ಸರಸ್ವತಿ, ಶೋಭಾ, ಅನುಪಮಾ, ಉಮಾದೇವಿ, ಸರೋಜಾ, ರಾಜ್ಮಾ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ತಿರುಮಲರಾವ ಇದ್ದರು.