

ಸಿಂಧನೂರು: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಕಾರ್ಯಕರ್ತೆಯರು ಬುಧವಾರ ಪತ್ರ ಚಳವಳಿ ನಡೆಸಿದರು.
ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ಗೌರವಧನ, ಕರೊನಾ ಸೋಂಕಿತರ ರಕ್ಷಣೆಗೆ ಮಾಸ್ಕ್, ಸ್ಯಾನಿಟೈಸರ್ ನೀಡಬೇಕು ಎನ್ನುವ ಇತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಕಳೆದ ಏಳು ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಗಾಂಧಿನಗರ, ಸಿಂಧನೂರು ನಗರ, ಸಿಂಧನೂರು ಗ್ರಾಮೀಣ, ದಢೇಸುಗೂರು, ಬಾದರ್ಲಿ, ಜವಳಗೇರಾ, ಸಾಲಗುಂದ, ತುರ್ವಿಹಾಳ, ಹಾರಾಪುರ, ಪಾಪಾರಾವಕ್ಯಾಂಪ್, ರಾಗಲಪರ್ವಿ, ಆರ್.ಎಚ್.ಕ್ಯಾಂಪ್‌ಗಳ ನೂರಾರು ಸಂಖ್ಯೆಯ ಆಶಾ ಕಾರ್ಯಕರ್ತೆಯರು ಸಿಎಂಗೆ ಬರೆದ ಪತ್ರಗಳನ್ನು ಪೋಸ್ಟ್ ಬಾಕ್ಸ್‌ಗಳಿಗೆ ಹಾಕಿ ಚಳವಳಿ ನಡೆಸಿದರು.
ಸಂಘದ ತಾಲೂಕು ಅಧ್ಯಕ್ಷೆ ಭೀಮಮ್ಮ ವಿರೂಪಾಪುರ, ಹೇಮಾವತಿ, ಚೆನ್ನಮ್ಮ, ಉಮಾದೇವಿ, ಶರಣಮ್ಮ, ನೇತ್ರಾವತಿ, ರೇಖಾ ರಾಯ್ ಇದ್ದರು.