

ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ |
ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದುಳಿರುವ ರಾಯಚೂರು ಜಿಲ್ಲೆಗೆ ಈ ಹಿಂದೆ ಐಐಟಿ ನೀಡದೆ ನಿರ್ಲಕ್ಷಿಸಿದ ಸರ್ಕಾರಗಳು, ಇದೀಗ ಏಮ್ಸ್ ನೀಡುವ ವಿಚಾರದಲ್ಲೂ ಬೇಜವಾಬ್ದಾರಿ ವಹಿಸಿದರೆ ಸರಿಯಲ್ಲ. ಕೂಡಲೇ ಬೇಡಿಕೆ ಈಡೇರಿಸಬೇಕು ಎಂದು ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.
ನಗರದ ಸರ್ಕಿಟ್‌ಹೌಸ್‌ನಲ್ಲಿ ಬುಧವಾರ ಸರ್ವ ಪಕ್ಷಗಳು, ಸಂಘಟಕರು ಹಾಗೂ ಪ್ರಮುಖರ ಸಭೆಯಲ್ಲಿ ಮಾತನಾಡಿ, ಏಮ್ಸ್ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕು. ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗುವ ಬದಲಾಗಿ, ಮುಖ್ಯಮಂತ್ರಿಗಳು ಜಿಲ್ಲೆಗೆ ಬರುವ ರೀತಿ ಹೋರಾಟ ರೂಪಿಸಬೇಕು. ಲಕ್ಷಾಂತರ ಜನ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.
ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಕೇಂದ್ರ ಸರ್ಕಾರ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಜು.1 ರಂದು ನಡೆಯುತ್ತಿರುವ ಹೋರಾಟದಲ್ಲಿ ಎಲ್ಲ ಮಠಾಧೀಶರು ಪಾಲ್ಗೊಳ್ಳುವಂತೆ ತಿಳಿಸಲಾಗುವುದು. ಇದೊಂದು ಪ್ರಮುಖ ಹೋರಾಟವಾಗಿದ್ದು, ಎಲ್ಲರೂ ಬೆಂಬಲಿಸಬೇಕು ಎಂದು ತಿಳಿಸಿದರು.
ಮನುಜಮತ ಬಳಗ ತಾಲೂಕು ಅಧ್ಯಕ್ಷ ಡಿ.ಎಚ್.ಕಂಬಳಿ ಮಾತನಾಡಿ, ಜು.1 ರಂದು ಜಿಲ್ಲಾದ್ಯಂತ ಹೋರಾಟ ನಡೆಯಲಿದೆ. ಸಿಂಧನೂರಿನ ಪ್ರವಾಸಿ ಮಂದಿರದಿಂದ ಪಕ್ಷಾತೀತವಾಗಿ ಪ್ರಮುಖರೆಲ್ಲರೂ ಒಗ್ಗೂಡಿ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಎಸ್.ದೇವೇಂದ್ರಗೌಡ, ವೀರಭದ್ರಪ್ಪ ಕುರುಕುಂದಿ, ಬಾಷುಮಿಯಾ, ಮುಖಂಡರಾದ ಕೆ.ಕರಿಯಪ್ಪ, ಕೆ.ಶರಣಪ್ಪ ಟೆಂಗಿನಕಾಯಿ, ರಾಜುಗೌಡ ಬಾದರ್ಲಿ, ಬಸವರಾಜ ಬಾದರ್ಲಿ, ಜಿಲಾನಿ ಪಾಷಾ, ಸುರೇಶ ಕಟ್ಟಿಮನಿ, ಮೌನೇಶ ದೊರೆ, ಗಂಗಣ್ಣ ಡಿಶ್, ಸಮದ್ ಚೌಧರಿ, ದಾವಲ್‌ಸಾಬ್ ದೊಡ್ಡಮನಿ ಇತರರಿದ್ದರು.