

ಸಿಂಧನೂರು: ನಗರದಲ್ಲಿ ಮಂಗಳವಾರ ುಟ್‌ಪಾತ್ ಅಂಗಡಿಗಳ ತೆರವುಗೊಳಿಸಿದ್ದರಿಂದ ಬೀದಿಬದಿ ವ್ಯಾಪಾರಸ್ಥರ ಸಂಘ ನಿರಶನ ಕೈಗೊಂಡ ಹಿನ್ನೆಲೆಯಲ್ಲಿ ಬುಧವಾರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅರುಣ್ ದೇಸಾಯಿ ಹಾಗೂ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಅತಿಕ್ರಮಣ ವಿಶೇಷ ಕಾಯ್ದೆಯಡಿ ಸರ್ಕಾರಿ ಜಾಗ ಒತ್ತುವರಿಯಾಗಬಾರದು. ಈ ಸಂಬಂಧ ಜಿಲ್ಲಾಧಿಕಾರಿ ಒಳಗೊಂಡು ಪ್ರತಿಯೊಬ್ಬರಿಗೂ ನ್ಯಾಯಾಲಯ ಸಮನ್ಸ್ ನೀಡಿದೆ. ನಿಯಮದಂತೆ ತೆರವು ಮಾಡಲಾಗಿದೆ. ಸಮಸ್ಯೆ ಆಗಿರಬಹುದು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಇರುವ ಅವಕಾಶದ ಬಗ್ಗೆ ಚರ್ಚಿಸೋಣ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನಗರದಲ್ಲಿ ಹಲವು ಸಿಎ ಸೈಟ್‌ಗಳು ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಿ. ಬೀದಿಬದಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಬೇಕು. ಶಾಸಕರ ನಿವಾಸಕ್ಕೆ ಹೋಗುವ ರಸ್ತೆ, ಜೆಸ್ಕಾಂ ಕಚೇರಿ ಮುಂಭಾಗ, ಎಡಿಬಿ ಬ್ಯಾಂಕ್, ಗೌಡಪ್ಪಗೌಡ ಜಾಗದ ಬಳಿ, ಎಪಿಎಂಸಿ ಒಂದನೇ ಗೇಟ್ 6 ಗುಂಟೆ ಜಾಗ ಹಾಗೂ ಕಾರು ನಿಲ್ದಾಣದಲ್ಲಿ ಮೂರು ಸ್ಥಳಗಳು, ದೇವರಾಜ ಅರಸು ಮಾರುಕಟ್ಟೆಯಲ್ಲಿ ಹಲವು ಜನ ಒತ್ತುವರಿ ಮಾಡಿಕೊಂಡಿದ್ದು, ಯಾಕೆ ತೆರವುಗೊಳಿಸಿಲ್ಲ ಎಂದು ಬೀದಿಬದಿ ವ್ಯಾಪಾರಿಗಳು ಪ್ರಶ್ನಿಸಿದರು
ಮುಖ್ಯರಸ್ತೆಗಳಲ್ಲಿ ಅಪಘಾತಗಳ ತಡೆಗೆ ತೆರವು ಅನಿವಾರ್ಯವಾಗಿದೆ. ಕನಕದಾಸ ವೃತ್ತದ ಜ್ಯೋತಿ ಸ್ವ ಸಹಾಯ ಸಂಘದ ಸ್ಥಳ, ಪ್ರವಾಸಿ ಮಂದಿರ ಪಕ್ಕದಲ್ಲಿರುವ 14 ಮಳಿಗೆ, ದೇವರಾಜ ಅರಸು ಮಾರುಕಟ್ಟೆ ಜಾಗ, ಹಣ್ಣಿನ ಮಾರುಕಟ್ಟೆಯಲ್ಲಿ ಹೂ-ಹಣ್ಣು ಮಾರಾಟ ಮಾಡಬಹುದು. ನಿಗದಿತ ಜಾಗವನ್ನು ನೀಡಲಿದ್ದು ಅಲ್ಲಿ ವ್ಯಾಪಾರ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದರು.
ಸಂಘಟನೆಯ ಪ್ರಮುಖರಾದ ಡಿ.ಎಚ್ ಪೂಜಾರ, ಚಂದ್ರಶೇಖರ ಗೊರೇಬಾಳ, ಬಸವಂತರಾಯಗೌಡ ಕಲ್ಲೂರು, ಬಿ.ಎನ್.ಯರದಿಹಾಳ, ಅಶೋಕ ನಂಜಲದಿನ್ನಿ, ಜಮಾಹತೆ ಇಸ್ಲಾಂ ಹುಸೇನ್ ಸಾಬ, ರಮೇಶ ಪಾಟೀಲ್ ಬೇರ‌್ಗಿ, ನಾಗರಾಜ ಪೂಜಾರ, ಬಸವರಾಜ ಹಿರೇಮನಿ ತಿಡಿಗೋಳ ಇದ್ದರು.