ಜನತೆಗೆ ನೀಡಿದ ಭರವಸೆ ಈಡೇರಿಸಿದ ಪುರಸಭೆ ಆಡಳಿತ

SND 8-1
Published on

ಸಿಂದಗಿ: ಅಧಿಕಾರಕ್ಕೂ ಮುನ್ನ ಜನರಿಗೆ ಕೊಟ್ಟ ಭರವಸೆ ಮತ್ತು ಅಭಿವೃದ್ಧಿಯ ಕೆಲಸ ಮಾಡುವ ಮೂಲಕ ಸಾರ್ವಜನಿಕರ ಆಶೋತ್ತರಗಳನ್ನು ಈಡೇರಿಸುವಲ್ಲಿ ಪುರಸಭೆಯ ಆಡಳಿತ ವರ್ಗ ಹಿಂದೆ ಬಿದ್ದಿಲ್ಲ ಎಂದು ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯಲ್ಲಿ ಪುರಸಭೆಯ 15ನೇ ಹಣಕಾಸು ಯೋಜನೆಯಡಿ 20 ಲಕ್ಷ ರೂ. ವೆಚ್ಚದ ಐದು ಪ್ರಮುಖ ರಸ್ತೆಗಳಲ್ಲಿನ ಬೀದಿ ದೀಪಗಳ ದುರಸ್ತಿ, ಬಣ್ಣ ಸೇರಿ ಎಲ್‌ಇಡಿ ಬಲ್ಬ್ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಥಳೀಯ ಜನರು ಹಲವಾರು ಬಾರಿ ನಗರದ ಪ್ರಮುಖ ರಸ್ತೆಗಳು ಕತ್ತಲಮಯಗೊಂಡಿದ್ದರ ಬಗ್ಗೆ ತಮ್ಮ ಅಸಮಾಧಾನ ಹೊರಹಾಕುತ್ತಲೇ ಇದ್ದರು. ಆದರೆ, ಆಡಳಿತ ಮಂಡಳಿ ಸದಸ್ಯರ ಒಪ್ಪಿಗೆ ಪಡೆದು ಪುರಸಭೆಯಿಂದಲೇ ವಿಶೇಷವಾಗಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು. ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ವಿಜಯಪುರ ರಸ್ತೆಯ ಆರ್.ಡಿ. ಪಾಟೀಲ ಕಾಲೇಜಿನವರೆಗೆ(4.5ಲಕ್ಷ ರೂ.), ಜೇವರ್ಗಿ ರಸ್ತೆಯ ಬಸ್‌ಡಿಪೋ ವರೆಗೆ(4.5ಲಕ್ಷ ರೂ.), ಆಲಮೇಲ ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧೀಜಿ ವೃತ್ತ ಸೇರಿ ಟಿಪ್ಪು ಸುಲ್ತಾನ್ ವೃತ್ತದವರೆಗೆ(4.5ಲಕ್ಷ ರೂ.), ಬಸವೇಶ್ವರ ವೃತ್ತದಿಂದ ಗೋಲಗೇರಿ ನಾಕಾ ಮಾರ್ಗವಾಗಿ ಎಸ್ಸಿ ಹಾಸ್ಟೆಲ್‌ವರೆಗೆ(4.5ಲಕ್ಷ ರೂ.) ಹಾಗು ಸ್ವಾಮಿ ವಿವೇಕಾನಂದ ವೃತ್ತದಿಂದ ಬಂದಾಳ ರಸ್ತೆ ವರೆಗೆ(2ಲಕ್ಷ ರೂ.) ಬೀದಿ ದೀಪಗಳಿಗೆ ಹೊಸ ಕಾಯಕಲ್ಪ ಒದಗಿಸಲಾಗುತ್ತಿದೆ ಎಂದು ಹೇಳಿದರು. ಗೊಲ್ಲಾಳಪ್ಪಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷ ಹಾಸಿಂಪೀರ್ ಆಳಂದ, ಸದಸ್ಯೆ ಪ್ರಭಾವತಿ ಕಲ್ಲೂರ, ಬಸವರಾಜ ಸಜ್ಜನ, ಅನೀಲ ಕಡಕೋಳ, ಮಹಾಂತೇಶ ನಾಯ್ಕೋಡಿ, ಸತೀಶ ಪಾಟೀಲ, ಅವಿನಾಶ ದುರ್ಗಿ, ಅಹ್ಮದಪಟೇಲ ಬಿರಾದಾರ ಸೇರಿದಂತೆ ಪುರಸಭೆ ಮುಖ್ಯಾಧಿಕಾರಿ ಸುರೇಶ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net