

ಸಿಂದಗಿ: ಸ್ಥಳೀಯ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತದ ಐದು ವರ್ಷದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಒಂಬತ್ತು ಅಭ್ಯರ್ಥಿಗಳು ಆಯ್ಕೆಯಾದರು.
ಬ್ಯಾಂಕ್‌ನ ಒಟ್ಟು 15 ಸ್ಥಾನಗಳಲ್ಲಿ 6 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಇನ್ನುಳಿದ 9 ಸ್ಥಾನಗಳಿಗೆ ಭಾನುವಾರ ನಗರದ ಚೆನ್ನವೀರಸ್ವಾಮೀಜಿ ಪ್ರೌಢಶಾಲೆಯಲ್ಲಿ ಮತ ಚಲಾವಣೆ ಸಂಜೆ 4 ಗಂಟೆವರೆಗೆ ನಡೆದು ನಂತರ ತಡರಾತ್ರಿವರೆಗೂ ಮತಗಳ ಎಣಿಕೆ ನಡೆಯಿತು. 1553 ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದರು. 1302 ಸದಸ್ಯರು ಮತ ಚಲಾಯಿಸಿ ಕಣದಲ್ಲಿದ್ದ ಹಳೆಯ ಪ್ಯಾನಲ್‌ನ 8 ಜನ ಹಾಗೂ ಓರ್ವ ಹೊಸ ಸದಸ್ಯನನ್ನು ಆಯ್ಕೆ ಮಾಡಿದ್ದಾರೆ.
ಸುರೇಶಬಾಬು ಮುದ್ದಪ್ಪ ಜೋಗೂರ (876), ಷಣ್ಮುಖಪ್ಪ ಸಂಗಪ್ಪ ಸಂಗಮ (873), ಡಾ.ವಿಜಯಕುಮಾರ ಗುರುಸಂಗಪ್ಪ ವಾರದ (869), ರವಿ ಸಂಗನಬಸಪ್ಪ ನಾಗೂರ (822), ನಿಹಾಲ್‌ಚಂದ್ ರಾಮಚಂದ್ರ ಪೋರವಾಲ (811), ಶರಣಪ್ಪ ಶಿವಪೂಜಪ್ಪ ವಾರದ (790), ಸಿದ್ಲಿಂಗಪ್ಪ ವಡ್ಡೋಡಗಿ (788), ಪ್ರಕಾಶ ಕೋರಿ 744 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಹೊಸದಾಗಿ ಬಸವರಾಜ ಭೋಜಪ್ಪ ಕಮತಗಿ ಅವರು 804 ಮತಗಳನ್ನು ಪಡದು ಗೆದ್ದು ಬೀಗಿದರೆ, ಬ್ಯಾಂಕ್‌ನ ಹಾಲಿ ಅಧ್ಯಕ್ಷ ಬಸವರಾಜ ಶಹಾಪೂರ ಹಾಗೂ ಇನ್ನೋರ್ವ ಅಭ್ಯರ್ಥಿ ದುಂಡಪ್ಪ ಸೊನ್ನದ ಸೋಲುಂಡಿದ್ದಾರೆ.
ಅವಿರೋಧ ಆಯ್ಕೆ: ಮಹಿಳಾ ಸದಸ್ಯರಾಗಿ ಮಹಾದೇವಿ ಚೆನ್ನಬಸಪ್ಪ ಪಟ್ಟಣಶೆಟ್ಟಿ ಹಾಗೂ ಮಹಾದೇವಿ ಗುರುಬಸಪ್ಪ ಬಮ್ಮಣ್ಣಿ, ಹಿಂದುಳಿದ ವರ್ಗ (ಅ) ಕ್ಷೇತ್ರಕ್ಕೆ ಸಂತೋಷ ಪೂಜಾರಿ, ಹಿಂದುಳಿದ (ಬ) ವರ್ಗದ ಸ್ಥಾನಕ್ಕೆ ನೀಲಕಂಠ ದಾನಪ್ಪ ಗುಣಾರಿ, ಪರಿಶಿಷ್ಟ ಜಾತಿ ಕ್ಷೇತ್ರಕ್ಕೆ ಲಕ್ಷ್ಮಣ ಶಂಕರ ದೊಡಮನಿ ಹಾಗೂ ಪರಿಶಿಷ್ಟ ಪಂಗಡ ಸ್ಥಾನಕ್ಕೆ ಮಹಾದೇವಪ್ಪ ಚಂದ್ರಾಮಪ್ಪ ಸಿಂದಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂಡಿಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ನಿರೀಕ್ಷಕ ವಿಜಯಕುಮಾರ ನಾಯಕ ಹಾಗೂ ಸಹಾಯಕ ಚುನಾವಣಾಧಿಕಾರಿ ಎಸ್.ಎಸ್.ಸದ್ದಲಗಿ ಕಾರ್ಯ ನಿರ್ವಹಿಸಿದರು.