ಗ್ರಾಪಂ ಸದಸ್ಯರಿಗೆ ಗೌರವ ಧನ ಹೆಚ್ಚಿಸಲು ಹೋರಾಡುವೆ

SND 1-2
Published on

ಸಿಂದಗಿ: ಜನಪ್ರತಿನಿಧಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳು ಗ್ರಾಪಂ ಸದಸ್ಯರಿಗೂ ಸಿಗುವಂತೆ ನಾನು ಅನೇಕ ಬಾರಿ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ನನ್ನ ಪ್ರದೇಶಾಭಿವೃದ್ಧಿಯ ನಿಧಿಯನ್ನು ಸ್ಥಳೀಯವಾಗಿಯೇ ಬಳಸಿ ಕರೊನಾ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಂಡಿದ್ದೇನೆ ಎಂದು ವಿಧಾನ ಪರಿಷತ್ ಬಾಗಲಕೋಟೆ - ವಿಜಯಪುರ ದ್ವಿಸದಸ್ಯ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಹೇಳಿದರು.

ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಸಿಂದಗಿ, ಆಲಮೇಲ ತಾಲೂಕಿನ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಪಂ ಸದಸ್ಯರಿಗೆ ಮಾಸಿಕ 3 ಸಾವಿರ ಗೌರವಧನ ಸಿಗುವವರೆಗೂ ನಾನು ನಿರಂತರ ಪ್ರಯತ್ನಿಸುತ್ತೇನೆ. ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ಸದಸ್ಯರಿಗೆ ಉಚಿತ ಬಸ್‌ಪಾಸ್ ವ್ಯವಸ್ಥೆ ಮಾಡುವಲ್ಲಿ ಅನೇಕ ಬಾರಿ ಸದನದಲ್ಲಿ ಚರ್ಚಿಸಿದ್ದೇನೆ. ಕಳೆದ ಬಾರಿ ಸದನದಲ್ಲಿ ಗ್ರಾಪಂ ಸದಸ್ಯರಿಗೆ ಮಾಸಿಕ 3 ಸಾವಿರ ರೂ. ಗೌರವಧನ ನೀಡಬೇಕು ಎಂದು ಧ್ವನಿ ಎತ್ತಿದಾಗ ರಾಜ್ಯದ ಗ್ರಾಪಂಗಳ 93 ಸಾವಿರ ಸದಸ್ಯರ ಪೈಕಿ ಅನೇಕರು ನನಗೆ ಕರೆ ಮಾಡಿ ಅಭಿನಂದಿಸಿರುವುದು ಖುಷಿ ನೀಡಿದೆ. ಹಳ್ಳಿಗಳಲ್ಲಿ ಮೂಲ ಸೌಕರ್ಯಗಳ ವ್ಯವಸ್ಥೆ ಅಷ್ಟೊಂದು ಸರಿಯಾಗಿಲ್ಲ. ಬಹುತೇಕ ಹಳ್ಳಿಗಳಲ್ಲಿ ಮಹಿಳೆಯರು ಬಯಲು ಶೌಚಕ್ಕೆ ಹೋಗುತ್ತಿರುವುದು ನಾಚಿಕೆಗೇಡು. ಅದನ್ನು ತಪ್ಪಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಸದಸ್ಯರ ಗೌರವ ಧನವನ್ನು ಆನ್‌ಲೈನ್ ಮುಖೇನ ಅವರ ಖಾತೆಗೆ ಜಮೆ ಮಾಡುವ ಯೋಜನೆ ರೂಪಿಸಿ ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯಿಸುವೆ. ಈ ಬಾರಿ ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕೆಂದು ಮನವಿ ಮಾಡಿದರು.

ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ಹಿನ್ನೆಲೆಯಲ್ಲಿ ಪಂಚಾಯತ್ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಿದ್ದು ಮಾಜಿ ಪ್ರಧಾನಿ ದಿ. ರಾಜೀವಗಾಂಧಿ ಸರ್ಕಾರ. ಮಹಾತ್ಮ ಗಾಂಧಿ ಅವರ ಕನಸನ್ನು ನನಸು ಮಾಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ. ಎನ್‌ಆರ್‌ಇಜಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಹೊಸ ಇತಿಹಾಸ ಸೃಷ್ಟಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಸರ್ಕಾರದಲ್ಲಿ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ಮಂಜೂರು ಮಾಡಿ ಬಡವರಿಗೆ ಆಶ್ರಯ ನೀಡಿದ್ದೇವೆ. ಆದರೆ, ಪ್ರಸ್ತುತ ರಾಜ್ಯ ಸರ್ಕಾರ ಬಡವರ ಯೋಜನೆ ಕಿತ್ತುಕೊಂಡು ಇಲ್ಲಿಯವರೆಗೂ ಯಾವ ಮನೆಗಳನ್ನು ಮಂಜೂರು ಮಾಡದೆ ಅನ್ಯಾಯ ಮಾಡಿದೆ. ಗ್ರಾಪಂ ಮಟ್ಟದಲ್ಲಿ ಅತ್ಯಂತ ಜಟಿಲ ಸಮಸ್ಯೆಗಳಿಗೆ ಹೊಸ ಭಾಷ್ಯೆ ಬರೆಯಲೇಬೇಕು. ಇಲ್ಲವಾದಲ್ಲಿ ಹಳ್ಳಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗುತ್ತವೆ. ಹಳ್ಳಿಗಳ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸುನೀಲಗೌಡ ಪಾಟೀಲ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದರು.

ಹಿಕ್ಕಣಗುತ್ತಿ ಗ್ರಾಪಂ ಸದಸ್ಯ ನಿಂಗಣ್ಣ ಬಿರಾದಾರ ಮಾತನಾಡಿ, ಕಳೆದ ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದ ನಾಯಕರೇ ಕಾರಣ. ನಿಷ್ಠಾವಂತಿಕೆ ಮೊದಲು ಮುಖಂಡರಲ್ಲಿ ಬರಬೇಕು ಎಂದು ಪಕ್ಷದಲ್ಲಿ ವಿರೋಧ ಚಟುವಟಿಕೆ ನಡೆಸುತ್ತಿರುವ ಕೈ ನಾಯಕರಿಗೆ ಚಾಟಿ ಏಟು ಬೀಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಮಲ್ಲಣ್ಣ ಸಾಲಿ, ಮಾಜಿ ಶಾಸಕ ಅಶೋಕ ಶಾಬಾದಿ, ಶರಣಪ್ಪ ಸುಣಗಾರ, ವೈ.ಸಿ. ಮಯೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೋಳೂರ ಮಾತನಾಡಿದರು. ತಾಲೂಕಿನ ವಿವಿಧ ಗ್ರಾಪಂ ಸದಸ್ಯರು ತಮ್ಮ ಪಂಚಾಯಿತಿ ವ್ಯಾಪ್ತಿಯ ಅನೇಕ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರು.

ಕಾಂಗ್ರೆಸ್ ನಾಯಕರಾದ ಗುರನಗೌಡ ಪಾಟೀಲ ನಾಗಾವಿ, ರಫೀಕ್ ಕಾಣೆ, ಮುರಿಗೆಪ್ಪಗೌಡ ರದ್ದೇವಾಡಗಿ, ಎಸ್.ಎಂ. ಪಾಟೀಲ ಗಣಿಹಾರ, ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ, ಸಂತೋಷ ಹರನಾಳ, ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯೂಬ್ ದೇವರಮನಿ, ಪರುಶುರಾಮ ಕಾಂಬಳೆ, ಚಂದ್ರಕಾಂತ ಸಿಂಗೆ ಇತರರಿದ್ದರು. ಕಾಂತು ಒಡೆಯರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net